ನೋಟಿಸ್ ತಲುಪಿದ ತಕ್ಷಣ ಉತ್ತರ

ಬೆಂಗಳೂರು, ಸೆ. ೧೩- ಕಾಂಗ್ರೆಸ್ ಹೈಕಮಾಂಡ್ ನೀಡಿರುವ ನೋಟಿಸ್ ತಮ್ಮ ಕೈ ಸೇರಿದ ನಂತರ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ನ ನೋಟಿಸ್ ತಮ್ಮ ಕೈ ಸೇರಿಲ್ಲ. ನೋಟಿಸ್‌ಗೆ ಉತ್ತರ ಕೊಡಲು ೧೦ ದಿನಗಳ ಅವಕಾಶ ಇದೆ. ನೋಟಿಸ್ ತಮ್ಮ ಕೈ ಸೇರಿದ ತಕ್ಷಣ ಉತ್ತರ ನೀಡುತ್ತೇನೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿ.ಕೆ. ಹರಿಪ್ರಸಾದ್ ಟೀಕೆ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಹೈಕಮಾಂಡ್ ಹರಿಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಿ, ೧೦ ದಿನಗಳ ಒಳಗೆ ಉತ್ತರ ನೀಡುವಂತೆ ಹೇಳಿತ್ತು.ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಬಿಲ್ಲವ ಈಡಿಗ ಸಮಾವೇಶದಲ್ಲಿ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರೇಳದೆ ವಾಗ್ದಾಳಿ ನಡೆಸಿ, ಪಂಚೆ, ಟ್ಯೂಬ್ಲೆಟ್ ವಾಚ್ ಕಟ್ಟಿಕೊಂಡು ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳುವುದು ಸರಿಯಲ್ಲ. ದೇವರಾಜ ಅರಸು ರವರ ಕಾರಿನಲ್ಲಿ ಹೋದ ತಕ್ಷಣ ಅರಸು ಆಗುವುದಿಲ್ಲ. ಅವರ ಚಿಂತನೆ ಇರಬೇಕು ಎಂದು ಹೇಳಿದ್ದರು.ಅಧಿಕಾರ ಸಿಕ್ಕಿಲ್ಲವೆಂದು ಅಡ್ವಾಣಿಯವರನ್ನು ನಾನು ಭೇಟಿ ಮಾಡಿರಲಿಲ್ಲ ಎಂದು ಹರಿಪ್ರಸಾದ್ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.ಹರಿಪ್ರಸಾದ್ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರಿಗೆ ನೋಟಿಸ್ ಜಾರಿ ಮಾಡಿದೆ.