ನೋಟಿನ ಹಾರದ ಹರಕೆ ಸಲ್ಲಿಸುವ ಭಕ್ತರು

ದಾವಣಗೆರೆ.ಏ.೨: ಜಾತ್ರೆ ಅಂದರೆ ಜನಸ್ತೋಮ, ಪೂಜೆ, ಪುನಸ್ಕಾರ, ಹರಕೆ ತೀರಿಸಲು ಬರುವ ಜನರು, ಉತ್ಸವ ಜೋರಾಗಿಯೇ ಇರುತ್ತದೆ. ಆದರೆ, ಈ ಗ್ರಾಮದಲ್ಲಿ ಭಕ್ತರ ಹರಕೆಯೇ ಬೇರೆ ರೀತಿಯಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಮ್ಮ ಕೈಲಾದ ಹಣ ನೀಡುತ್ತಾರೆ. ಮಾತ್ರವಲ್ಲ ಗ್ರಾಮದ ಪ್ರತಿ ಮನೆಯಿಂದಲೂ ನೋಟಿನ ಹಾರವೇ ಈ ದೇವರಿಗೆ ಸಲ್ಲಿಕೆ ಆಗುವ ಹರಕೆ.ಅಬ್ಬಾ, ಇದೇನು, ನೋಟಿನ ಹಾರಗಳ ಕಾಣಿಕೆಯ ಹರಕೆಯೇ ಎಂದು ಹುಬ್ಬೇರಿಸಬೇಡಿ. ಎಲ್ಲಿ ನಡೆಯುತ್ತಿದೆ ಎಂದು ಕಣ್ಣರಳಿಸಬೇಡಿ. ಬನ್ನಿ, ಜಾತ್ರೆಗೆ ಹೋಗಿ ಬರೋಣ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಪ್ರತಿವರ್ಷವೂ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಅಂಗವಾಗಿ ಜಾತ್ರೆ ಆಚರಿಸಲಾಗುತ್ತದೆ. ಇದು ಎಲ್ಲೆಡೆ ನಡೆಯುವುದಕ್ಕಿಂತ ವಿಶೇಷ. ಅದೇ ನೋಟಿನ ಹರಕೆಯ ಜಾತ್ರೆ.ಗರಿ ಗರಿ ನೋಟುಗಳ ದುಡ್ಡಿನ ಹಾರ ಹಾಕಿ ಊರ ತುಂಬೆಲ್ಲಾ ಮೆರವಣಿಗೆ ನಡೆಸುವ ಮೂಲಕ ಕೊಕ್ಕನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಬಳಿಕ ಪಲ್ಲಕ್ಕಿ ಉತ್ಸವ ವಿಜೃಂಭಣೆ, ವೈಭವದಿಂದ ನೆರವೇರಿಸಲಾಗುತ್ತದೆ. ಭಕ್ತರು ಸ್ವತಃ ನೋಟಿನ ಹಾರಗಳನ್ನ ಹಾಕಿದ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಾವಿರಾರು ರೂಪಾಯಿ ನೋಟಿನ ಹಾರವೇ ಈ ದೇವರಿಗೆ ಹಾಕಿ ಭಕ್ತಿಯಿಂದ ಸೇವೆ ಸಲ್ಲಿಸುವ ಮೂಲಕ ಭಕ್ತರು ತಮ್ಮ ಹರಕೆ ಸಲ್ಲಿಸುತ್ತಾರೆ.ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ. ಭಕ್ತರ ಪಾಲಿಗೆ ಎಲ್ಲವನ್ನೂ ಕರುಣಿಸುವ ದೇವರು. ಮನೆ ಮನೆಗೆ ನೋಟಿ ಹಾರದಲ್ಲಿ ಸಿಂಗಾರಗೊಂಡು ಪಲ್ಲಕ್ಕಿಯಲ್ಲಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಇಟ್ಟು ಸಾಗಲಾಗುತ್ತದೆ. ಈ ಪಲ್ಲಕ್ಕಿಯು ಮನೆ ಮನೆಗೆ ಹೋಗಿ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ಈ ವೇಳೆ ಪೂಜಾ ಸಾಮಗ್ರಿಗಳು, ಕಾಯಿ, ಹೂವು, ಹಣ್ಣ ಹಾಗೂ ಅವರಿಗೆಷ್ಟು ಸಾಧ್ಯವೋ ಅಷ್ಟು ಕಾಣಿಕೆ ರೂಪದಲ್ಲಿ ದೇವರಿಗೆ ಸಮರ್ಪಿಸಲಾಗುತ್ತದೆ. ಈ ವೇಳೆ ಪೂಜೆ ಸಲ್ಲಿಸುವ ಭಕ್ತರು ನೋಟಿನ ಹಾರವನ್ನು ಹಾಕುತ್ತಾರೆ.ಬೆಳಿಗ್ಗೆ ಆರಂಭವಾಗಿ ಸಂಜೆವರೆಗೆ ದೇವರುಗಳ ಮನೆ ಮನೆ ದರ್ಶನವು ಸಂಜೆ ವೇಳೆಗೆ ಮುಗಿಯುತ್ತದೆ. ದೇವಸ್ಥಾನಕ್ಕೆ ವಾಪಸ್ ಬಂದ ಬಳಿಕ ಪಲ್ಲಕ್ಕಿಗೆ ಹಾಕಿದ ನೋಟುಗಳ ಹಾರಗಳನ್ನು ತೆಗೆದು ಎಣಿಕೆ ಮಾಡಲಾಗುತ್ತದೆ.ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಜಾತ್ರೆ ಆಗಲಿ ಪೊಲೀಸರ ರಕ್ಷಣೆ ಇದ್ದೇ ಇರುತ್ತದೆ. ಆದರೆ ಈ ಗ್ರಾಮದಲ್ಲಿ ನೋಟಿನ ಹಾರಗಳ ಮೆರವಣಿಗೆ ನಡೆದರೂ ಯಾವುದೇ ಪೊಲೀಸ್ ಸಿಬ್ಬಂದಿ ಇಲ್ಲಿ ಕಾಣ ಸಿಗುವುದಿಲ್ಲ. ಎಲ್ಲವನ್ನೂ ಗ್ರಾಮಸ್ಥರೇ ಜವಾಬ್ದಾರಿ ಹೊತ್ತುಕೊಂಡು ಯಾವುದೇ ಸಣ್ಣ ಲೋಪ ಬಾರದಂತೆ ರಥೋತ್ಸವವನ್ನು ಸಾಂಗವಾಗಿ ನಡೆಸಿಕೊಡುತ್ತಾರೆ. ಇದು ಗ್ರಾಮದ ಪ್ರತಿಯೊಬ್ಬರ ಮನೆ ಹಬ್ಬವಾಗಿದೆ.