ನೋಟಿಗೆ ವೋಟನ್ನು ಮಾರಿಕೊಳ್ಳದಿರಿ : ಜಿಪಂ ಸಿಇಒ ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ ಏ20: ಮತದಾರರು ತಮ್ಮ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ಕಂಡು ಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು, ನೋಟಿಗಾಗಿ ತಮ್ಮ ವೋಟನ್ನು ಮಾರಿಕೊಳ್ಳದೆ  ತಾವುಗಳು ಜಾಗೃತ ಪ್ರಜೆಗಳಾಗಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಸದಾಶಿವ ಪ್ರಭು ಅವರು ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದ ಆರ್‍ಬಿಎಸ್‍ಎಸ್‍ಎನ್ ಗಣಿಗಾರಿಕೆ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಗಣಿ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಾವುಗಳು ಸಹ ಸಹಕಾರ ನೀಡಬೇಕು. ಕಡ್ಡಾಯ ಮತದಾನದಲ್ಲಿ ಸ್ವಾಭಿಮಾನದಿಂದ ಪಾಲ್ಗೊಳ್ಳುವ ದೃಢ ಸಂಕಲ್ಪ ಹೊಂದಿರಬೇಕು ಎಂದರು.
ಸಂಸ್ಥೆಯ ವ್ಯವಸ್ಥಾಪಕ ಎಸ್.ಕೆ.ಸ್ವಾಮಿ ಅವರು ಮಾತನಾಡಿ ಮತದಾನ ನಡೆಯುವ ದಿನ ಮೇ10ರಂದು ಗಣಿ ಕಾರ್ಮಿಕರು ಕಡ್ಡಾಯ ಮತದಾನವನ್ನು ಮಾಡಬೇಕು ಸಂಸ್ಥೆಯಿಂದ ನಿಮಗೆ ವೇತನ ಸಹಿತ ರಜೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಈ ವೇಳೆ ಗಣಿ ಕಾರ್ಮಿಕರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ವಿ.ರಮೇಶ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಎಮ್.ಸಿ.ಕುಮಾರ್, ಗಣಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.