ನೊಂದ ಯುವತಿಯರ ಸೇವೆ ಭಗವಂತನ ಪೂಜೆಗೆ ಸಮಾನ: ನ್ಯಾ.ಸಿದ್ರಾಮ ಟಿ.ಪಿ

ಬೀದರ:ಅ.29: ಪೋಕ್ಸೊ ಕೇಸ್‍ಗಳಲ್ಲಿ ನೊಂದ ಯುವತಿಯರ ಸೇವೆ ಮಾಡುವುದು ಅದು ಭಗವಂತನ ಪೂಜೆಗೆ ಸಮಾನವಾಗಿದೆ ಎಂದು ಪ್ರಧಾನ ಸಿವಿಲ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಿದ್ರಾಮ.ಟಿ.ಪಿ ನುಡಿದರು.

ಬುಧವಾರ ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಡಿ ನಡೆಯುತ್ತಿರುವ ಸಾಂತ್ವನ ಕೇಂದ್ರದಲ್ಲಿ ಪೋಕ್ಸೊ ಕಾಯಿದೆಯಡಿ ನೊಂದ ಯುವತಿಯರಿಗೆ ಮಹಿಳಾ ಮಂಡಳದ ವತಿಯಿಂದ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

ಇಂದು ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯುವತಿಯರ ಮೇಲೆ ಅತ್ಯಾಚಾರ, ಬಲಾತ್ಕಾರ ವ್ಯಾಪಕವಾಗಿ ಹೆಚ್ಚುತ್ತಿವೆ. ಸಾಲದು ಎಂಬಂತೆ ನೊಂದ ಯುವತಿಯರನ್ನು ಜೀವಂತವಾಗಿ ದಹಿಸಲಾಗುತ್ತಿದೆ. ಆ ರಾಜ್ಯಗಳಲ್ಲಿ ಸರ್ಕಾರಿ ಸಾಂತ್ವನ ಕೇಂದ್ರಗಳು ನಿಸ್ಕ್ರಿಯಗೊಂಡಿವೆ. ನಮ್ಮಲ್ಲಿ ಸಾಂತ್ವನ ಕೇಂದ್ರಗಳು ಖಾಸಗಿ ಸಂಘ, ಸಂಸ್ಥೆಗಳ ಮೂಲಕ ನಡೆಯುತ್ತಿರುವುದರಿಂದ ಇಲ್ಲಿ ಯುವತಿಯರಿಗೆ ಸುರಕ್ಷತೆ ಸಾಧ್ಯವಾಗಿದೆ ಎಂದರು.

ಪೋಕ್ಸೊ ಕೇಸ್‍ನಲ್ಲಿ ನೊಂದ ಯುವತಿಯರನ್ನು ಸಮಾಜ ನೋಡುವ ದೃಷ್ಟಿಕೋನ ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ. ಅವರನ್ನು ಅಸ್ಪ್ರಶ್ಯರಂತೆ ಕಾಣುವ ಈ ಲೋಕದಲ್ಲಿ ಅವರಿಗೆ ಆಸರೆ ನೀಡಿ, ಅಕ್ಕರೆ ತೋರಿ, ತಾಯಿಯ ಮಮತೆ ದಯಪಾಲಿಸುತ್ತಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಅವರ ತ್ಯಾಗ ಮೆಚ್ಚುವಂಥದ್ದು ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಭಾರತ ಸ್ಕೌಟ್ಸ್ ಮತ್ತು ಗೈಡ್‍ನ ಆಯುಕ್ತರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಶಿವಕುಮಾರ ಸ್ವಾಮಿ ಅವರು, ಸಾಂತ್ವನ ಕೇಂದ್ರದಲ್ಲಿನ ಯುವತಿಯರಲ್ಲಿ ಮತ್ತಷ್ಟು ಧೈರ್ಯ ಬರಬೇಕಾದರೆ ಅವರಿಗೆ ವೀರ ವನಿತೆಯರ ಚಿರಿತ್ರೆಯುಳ್ಳ ಪುಸ್ತಕಗಳು ಓದಲು ಕೊಡಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಜಾಗೃತವಾಗುತ್ತದೆ. ಸದೃಢ ಯುವಜನರಿದ್ದರೆ ಆ ಸಮಾಜ ಹಾಗೂ ದೇಶ ಬಲಿಷ್ಟವಾಗಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಮಹಿಳಾ ಮಂಡಳದ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ನಮ್ಮ ಮಹಿಳಾ ಮಂಡಳಿಯು 1985ರಲ್ಲಿ ನೊಂದಣಿಯಾಗಿದ್ದು ಇದರ ಮುಖ್ಯ ಉದ್ದೇಶವೆಂದರೆ, ನಿರ್ಗತಿಕ ಮಹಿಳೆಯರು, ವಿಕಲಚೇತನರು, ವಿಧವೆಯರು, ವಿವಾಹ ವಿಚ್ಚೇದಿತರು ಇತ್ಯಾದಿ ನೊಂದ ಮಹಿಳೆಯರಿಗೆ ಆಶ್ರಯ ಕೊಟ್ಟು ಹೊಲಿಗೆ, ಅಗರಬತ್ತಿ, ಹಪ್ಪಳ ತಯ್ಯಾರಿಕೆ, ಕಸುತಿ, ಝರಿ ಕಸುತಿ ಇತ್ಯಾದಿ ಕೌಶಲ್ಯ ತರಬೇತಿ ನೀಡಿ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಎಸ್.ಬಿ.ಐ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ನೀಡಲಾಗಿದೆ. 20 ಜನ ವಿಕಲಚೇತನರು, ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗಗಳ ಮಹಿಳೆಯರಿಗೆ ತಮ್ಮ ಸ್ವಂತದ ಜಮಿನಿನಲ್ಲಿ 42 ಸಾವಿರ ವೆಚ್ಚದಲ್ಲಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಕಾರ್ಯ ಮನಗಂಡು ಸರ್ಕಾರ ಕಡಿಮೆ ದರದಲ್ಲಿ 2 ಎಕರೆ 28 ಗುಂಟೆ ಜಮಿನು ಮಂಜುರಿ ಮಾಡಿದೆ. ಅದರಲ್ಲಿ 14 ಜನ ವಿಕಲಚೇತನರು, 16 ಜನ ವಿಧವೆಯರು, 6 ಜನ ವಿವಾಹ ವಿಚ್ಚೇದಿತರು ಸೇರಿದಂತೆ ಸುಮಾರು 80 ನೊಂದ ಕುಟುಂಬಗಳಿಗೆ ನಿವೇಶನ ಮಂಜುರು ಮಾಡಲಾಗಿದೆ. ಇಲ್ಲಿಯ ವರೆಗೆ ಸುಮಾರು 520 ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು. ಮಹಿಳಾ ಮಂಡಳದ ಖಜಾಂಚಿ ಅನುರಾಧಾ ಚವ್ಹಾಣ, ದಿಲೀಪ, ಸ್ಕೌಟ್ಸ್ ಮತ್ತು ಗೈಡ್ ಸಂಘಟನಾಯುಕ್ತ ಕೆ.ಎಸ್ ಚಳಕಾಪುರೆ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಪೋಕ್ಸೊ ಕೇಸ್‍ನಲ್ಲಿ ನೊಂದ ಯುವತಿಯರಾದ ಜಯಸುಂದರಿ, ನಂದಿನಿ ಹಾಗೂ ರಾಹುಬಾಯಿ, ಬಾಲ್ಯ ವಿವಾಹಕ್ಕೆ ಒಳಗಾದ ಯುವತಿ ಕ್ರಿಸ್ತಕುಮಾರಿ ತಮ್ಮ ಅನುಭವ ಹಂಚಿಕೊಂಡರು.

ಆರಂಭದಲ್ಲಿ ಶಿವಕಾಂತಾ ಮನೋಹರ ಸ್ವಾಗತ ಗೀತೆ ಹಾಡಿದರೆ, ಸುನಿತಾ ಸಂದೀಪ ಸ್ವಾಗತಿಸಿದರು. ಸವಿತಾ ವರದಿ ವಾಚನ ಮಾಡಿದರು. ಗೀತಾ ಶ್ರೀಹರಿ ಕಾರ್ಯಕ್ರಮ ನಿರೂಪಿಸಿ ಸುನಿತಾ ದಾಡಗೆ ವಂದಿಸಿದರು.