ನೊಂದ ಕುಟುಂಬಗಳಿಗೆ ಸಚಿವ ಪ್ರಭು ಚವ್ಹಾಣ್ ಸಾಂತ್ವನ

ಬೀದರ:ಜೂ.4: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜೂ.3ರಂದು ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ, ಕೋವಿಡ್-19ನಿಂದ ಮೃತಪಟ್ಟ ಬಿಜೆಪಿಯ ಪ್ರಮುಖ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈಯಕ್ತಿಕ ಧನಸಹಾಯ ಮಾಡುವ ಮೂಲಕ ಔದಾರ್ಯ ಮೆರೆದರು.

ಕೋವಿಡ್-19ನಿಂದ ಮರಣ ಹೊಂದಿದ ಔರಾದ್ ತಾಲ್ಲೂಕು ಚಿಕ್ಲಿ(ಯು) ಗ್ರಾಮದ ಧೊಂಡಿಬಾ ಪರಿಟ್, ಹೊಕ್ರಾಣಾ ಗ್ರಾಮದ ಮಹಾದೇವ ವಿಶ್ವನಾಥ, ನಂದಿ ಬಿಜಲಗಾಂವ ಗ್ರಾಮದ ರಮೇಶ ಪಾಟೀಲ್, ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿಮ್ಮೇಗಾಂವ್ ಗ್ರಾಮದ ಗೋವಿಂದ ವಿಠಲ್ ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ಚಿಕ್ಲಿ(ಜೆ) ಗ್ರಾಮದ ಅಣ್ಣಾರಾವ್ ಮುರ್ಕೆ, ಕ್ಯಾನ್ಸರ್‍ನಿಂದ ಮೃತರಾದ ಖೇಡ್ ಗ್ರಾಮದ ವಿನೋದ ಕಾಮಶೆಟ್ಟಿ ಅವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ಕುಟುಂಬಸ್ಥರ ನೋವುಗಳನ್ನು ಆಲಿಸಿದರು. ಅವರಿಗೆ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕ ಧನಸಹಾಯ ಮಾಡಿದರು.

ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದಾಗಿ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಪಕ್ಷದ ಕಾರ್ಯಕರ್ತರು ನನ್ನ ಕುಟುಂಬದ ಸದಸ್ಯರಿದ್ದಂತೆ. ನಾನು ಸದಾ ಅವರೊಂದಿಗಿದ್ದೇನೆ. ಕೋವಿಡ್‍ನಿಂದಾಗಿ ಸಾವು-ನೋವುಗಳನ್ನು ಅನುಭವಿಸಿದ ಕಾರ್ಯಕರ್ತರ ಕುಟುಂಬದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ. ಯಾವುದೇ ರೀತಿಯ ಸಹಾಯದ ಅಗತ್ಯವಿದ್ದಲ್ಲಿ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು. ದಿನದ 24 ಗಂಟೆಯೂ ನಿಮ್ಮ ನೆರವಿಗೆ ಸಿದ್ಧ ಎಂದು ಕುಟುಂಬಸ್ಥರಲ್ಲಿ ಧೈರ್ಯ ತುಂಬಿದರು.

ನನ್ನ ಬೆಳವಣಿಗೆಗೆ ಆಧಾರಸ್ಥಂಬದಂತಿರುವ ಪಕ್ಷದ ಕಾರ್ಯಕರ್ತರ ನೋವು-ನಲಿವುಗಳಲ್ಲಿ ಭಾಗವಹಿಸುವುದು ನನ್ನ ಮೊದಲ ಆದ್ಯತೆ ಎಂದು ಭಾವಿಸಿದ್ದು, ಸಂಕಷ್ಟದಲ್ಲಿರುವ ಕಾರ್ಯಕರ್ತರು ಮತ್ತು ಅವರ ಕುಟುಂಬಸ್ಥರಿಗೆ ನೆರವು ನೀಡಲು ಸದಾ ಪ್ರಯತ್ನಿಸುತ್ತಿರುತ್ತೇನೆ ಎಂದು ಸಚಿವರು ತಿಳಿಸಿದರು.

ಕೋವಿಡ್-19 ಸೋಂಕು ನಮ್ಮ ದೇಶವನ್ನು ಒಳಗೊಂಡು ಇಡೀ ಜಗತ್ತಿಗೆ ಪೇಡಂಭೂತವಾಗಿ ಕಾಡುತ್ತಿದೆ. ಇದರ ಪ್ರಭಾವ ನಮ್ಮ ಪಕ್ಷದ ಮೇಲೂ ಬೀರಿದೆ. ಈ ಮಹಾಮಾರಿಯಿಂದಾಗಿ ಅನೇಕ ಕಾರ್ಯಕರ್ತರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಎಲ್ಲರೂ ಅತ್ಯಂತ ಜಾಗೃತಿಯಿಂದ ಇರಬೇಕು. ಆರೋಗ್ಯದ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಹಿರಿಯ ಮುಖಂಡರಾದ ಬಂಡೆಪ್ಪ ಕಂಟೆ, ಹೊಕ್ರಾಣಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಅಚ್ಛೆಗಾವೆ ಸೇರಿದಂತೆ ಇತರರು ಉಪಸ್ಥಿತರಿದ್ದರು.