ನೈಸರ್ಗಿಕ ಸಂಪತ್ತು ಸಂರಕ್ಷಿಸೋಣ: ಶಾಸಕ ಪಾಟೀಲ್

ಅಫಜಲಪುರ: ಜೂ.6:ನಿಸರ್ಗ ನಮಗೆ ಎಲ್ಲವನ್ನು ಉಚಿತವಾಗಿ ನೀಡುತ್ತಿದೆ. ಆದರೂ ನಾವು ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಲೇ ಇದ್ದೇವೆ. ಪರಿಸರ ನಾಶದಿಂದ ಸಾಕಷ್ಟು ಅವಾಂತರಗಳಾಗಿವೆ. ಹೀಗಾಗಿ ಇಂದಿನಿಂದಲೇ ಸಸಿ ನೆಟ್ಟು ನೈಸರ್ಗಿಕ ಸಂಪತ್ತು ಸಂರಕ್ಷಿಸೋಣ ಎಂದು ಶಾಸಕ ಎಂ.ವೈ ಪಾಟೀಲ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಅರಣ್ಯ ಇಲಾಖೆ, ಪುರಸಭೆ, ತಾಲೂಕು ದಂಡಾಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪರಿಸರ ನಾಶ ನಿಜಕ್ಕೂ ಭವಿಷ್ಯದಲ್ಲಿ ಕೆಟ್ಟ ಪರಿಣಾಮ ಉಂಟು ಮಾಡಲಿದೆ. ಅಲ್ಲದೆ ಇಂಥದ್ದೆ ಇನ್ನೊಂದು ಕೆಟ್ಟ ಪದ್ದತಿ ನಮ್ಮ ಗ್ರಾಮೀಣ ಭಾಗಗಳಲ್ಲಿ ನೋಡುತ್ತಿದ್ದೇವೆ.

ಮಹಿಳೆಯರು ಶೌಚಾಲಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ನಾನು ಹೋದಲ್ಲೆಲ್ಲ ಶೌಚಾಲಯ ಕಟ್ಟಿಸಿಕೊಡಿ ಎನ್ನುತ್ತಾರೆ. ಆದರೆ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಿ ಎಂದರೆ ಮೌನವಾಗುತ್ತಾರೆ. ಹೀಗಾಗಿ ನಾವೆಲ್ಲರೂ ಜನರಲ್ಲಿ ಜಾಗೃತಿ ಮೂಡಿಸಿ ಮನೆಗೊಂದು ಮರ, ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ. ಇದಕ್ಕೆ ಬೇಕಾದ ರೀತಿಯ ಸಹಕಾರಕ್ಕೆ ನಾನು ಸದಾ ಸಿದ್ದನಿದ್ದೇನೆ ಎಂದರು.

ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಸಮಾಜದ ಧ್ಯೇಯ ವಾಕ್ಯದೊಂದಿಗೆ ಈ ಬಾರಿಯ ಪರಿಸರ ದಿನವನ್ನು ನಾವೆಲ್ಲ ಆಚರಿಸುತ್ತಿದ್ದೇವೆ. ಇದು ಕೇವಲ ಒಂದು ದಿನದ ಘೋಷಣೆಯಾಗಿ ಉಳಿಯಬಾರದು. ಪ್ರತಿದಿನ ಪರಿಸರ ದಿನವಾಗಬೇಕು ಅಂದಾಗ ಪರಿಸರದ ರಕ್ಷಣೆಯಾಗಲು ಸಾಧ್ಯವಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಪಂಕಜಾ ರಾವೂರ ಮಾತನಾಡಿ ಪುರಸಭೆ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರ ದಿನದಂದು ಆ ಕಾರ್ಯಕ್ರಮ ಮುಕ್ತಾಯವಾಗಿದ್ದು ಪ್ಲಾಸ್ಟಿಕ್ ತ್ಯಾಜ್ಯ, ನಿರುಪಯುಕ್ತ ಬಟ್ಟೆ, ಪ್ಲಾಸ್ಟಿಕ್ ಸಾಮಗ್ರಿಗಳು, ಆಟಿಕೆಗಳು, ಎಲೆಟ್ರಾನಿಕ್ ವಸ್ತುಗಳನ್ನು ಪುರಸಭೆಗೆ ನೀಡುವ ಮೂಲಕ ಅಭಿಯಾನದಲ್ಲಿ ಭಾಗಿಯಾದವರಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಪರಿಸರದ ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ಪುರಸಭೆ ಸದಸ್ಯ ಚಂದು ದೇಸಾಯಿ, ಮುಖಂಡರಾದ ಶಿವಾನಂದ ಗಾಡಿಸಾಹುಕಾರ, ಪ್ರಕಾಶ ಜಮಾದಾರ, ರೇಣುಕಾ ಸಿಂಗೆ, ವಿಶ್ವನಾಥ ಮಲಘಾಣ, ರವೂಫ್ ಪಟೇಲ್, ತಾ.ಪಂ ಯೋಜನಾಧಿಕಾರಿ ರೇಣುಕಾ, ವಲಯ ಅರಣ್ಯಾಧಿಕಾರಿ ಸಂತೋಷ ಇಂಡಿ, ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಇದ್ದರು.

ಅರಣ್ಯಾಧಿಕಾರಿ ಶಿವಗೊಂಡ ಪೂಜಾರಿ ಸ್ವಾಗತಿಸಿದರು. ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕಿ ಶ್ರೀದೇವಿ ರಾಠೋಡ ವಂದಿಸಿದರು.