
ದಾವಣಗೆರೆ-ಏ.23; ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಜೀವನಕ್ಕೆ ಮಾರಕ, ಮಾನವನ ಜೊತೆಯಲ್ಲಿ ಪ್ರಾಣಿಗಳಿಗೂ ತಮ್ಮ ಜೀವಕ್ಕೆ ಆತಂಕ ತರುವ ಪರಿಸ್ಥಿತಿ ಮೂಡಿ ಬರುತ್ತದೆ. ನಾವುಗಳು ಯಾವುದೇ ಸರ್ಕಾರಕ್ಕೆ, ಮಹಾನಗರ ಪಾಲಿಕೆ, ಇಲಾಖೆಗಳ ಮೇಲೆ ಅವಲಂಬಿತರಾಗದೇ ನಮ್ಮ ನಮ್ಮ ಮನೆಗಳ ಸ್ವಚ್ಛತೆ ಕಾಪಾಡುವುದು ನಮ್ಮ ಮನೆಗಳ ಸುತ್ತಮುತ್ತ ನೈಸರ್ಗಿಕ ಪರಿಸರ ಉಳಿಸಿ, ಬೆಳೆಸುವುದು ನಮ್ಲೆಲ್ಲರ ಆದ್ಯ ಕರ್ತವ್ಯ ಎಂದು ಹಿರಿಯ ಪರಿಸರವಾದಿ ಸ್ತಿçÃರೋಗ ತಜ್ಞೆ ಡಾ. ಶಾಂತಾ ಶ್ರೀಪಾದ್ ಭಟ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಕಛೇರಿ ಸಭಾಂಗಣದಲ್ಲಿ ನಿನ್ನೆ ನಡೆದ “ಕಸದರಿಂದ ರಸ” ಕಾರ್ಯಾಗಾರಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಹಿಳೆಯರಿಗೆ ಪ್ರತಿ ಹಂತದಲ್ಲೂ ಮನೆಯ ಅನವಶ್ಯಕ ವಸ್ತುಗಳನ್ನು ಹೇಗೆ ಸದ್ಭಳಕೆ ಮಾಡುವ ರೀತಿ- ನೀತಿಯನ್ನು ಮನದಟ್ಟು ಮಾಡಿ ಉಪನ್ಯಾಸ ನೀಡಿದರು.ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ‘ಮನೆ ಅಡುಗೆ’ ವಿಷಯ ಕುರಿತು ಕಾರ್ಯಾಗಾರ ನಡೆಸಿ, ಅಡುಗೆ ಮನೆಯಲ್ಲಿ ಇರುವ ಎಲ್ಲಾ ಪರಿಕರದೊಂದಿಗೆ ಸುಲಭವಾಗಿ ನಮ್ಮ ಅನಾರೋಗ್ಯದ ಸಮಸ್ಯೆಗಳ ಪರಿಹಾರದ ಬಗ್ಗೆ ತಿಳಿ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ಮಾತನಾಡಿ ಪ್ರಸ್ತುತ ವಾತಾವರಣದಲ್ಲಿ ಇಂತಹ ಕಾರ್ಯಾಗಾರ ಸೂಕ್ತ ನಿರಂತರವಾಗಿ ಈ ಸಂಸ್ಥೆ ಹೊಸ ಹೊಸ ಪರಿಕಲ್ಪನೆಯೊಂದಿಗೆ ವಿವಿಧ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.ಶ್ರೀಮತಿ ಜಯಶ್ರೀರಾಜು ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶ್ರೀಮತಿ ಸಂಧ್ಯಾ ಶ್ರೀನಿವಾಸ್ ಸ್ವಾಗತಿಸಿದರು. ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.