ನೈರ್ಮಲ್ಯ ಕಾಪಾಡುವುದು ಎಲ್ಲರ ಹೊಣೆ : ಸಾರಂಗಧರ ಶ್ರೀಗಳು

ಕಲಬುರಗಿ.ನ.7: ಸ್ವಚ್ಛತೆ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸ್ವಚ್ಛವಾದ ವಾತಾವರಣದಲ್ಲಿ ಮನಸ್ಸು ಶಾಂತವಾಗಿರಲು ಸಾಧ್ಯ. ದೈಹಿಕ, ಮಾನಸಿಕ ಆರೋಗ್ಯಕ್ಕೆ ಸ್ವಚ್ಛತೆ ಅಗತ್ಯವಾಗಿದೆ. ವೈಯಕ್ತಿಕ ಸ್ವಚ್ಛತೆ ಜೊತೆಗೆ ಮನೆಯ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಎಲ್ಲರ ಹೊಣೆಯಾಗಿದ್ದು, ಇದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆಯೆಂದು ಸುಲಫಲ್ ಮಠದ ಪರಮಪೂಜ್ಯ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದರು.
ಮಹಾನಗರ ಪಾಲಿಕೆ ವತಿಯಿಂದ ನಗರದ ಶಹಾಬಜಾರ ಬಡಾವಣೆಯಲ್ಲಿ ನೈರ್ಮಲ್ಯೀಕರಣಕ್ಕಾಗಿ ಫಾಗಿಂಗ್ ಮಾಡುವ ಕಾರ್ಯಕ್ಕೆ ಗುರುವಾರ ಮಠದಲ್ಲಿ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಸ್ವಚ್ಛತಯೇ ಕರೋನಾ ಸೇರಿದಂತೆ ಅನೇಕ ಕಾಯಿಲೆಗಳಿಗೆ ಮದ್ದಾಗಿದೆಯೆಂದರು.
ಸಮಾಜ ಸೇವಕ ಶ್ರೀಕಾಂತ ಬಿರಾದಾರ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡುವುದು ಕೇವಲ ಮಹಾನಗರ ಪಾಲಿಕೆ, ಪೌರ ಕಾರ್ಮಿಕರ ಕಾರ್ಯವಲ್ಲ. ಜೊತೆಗೆ ಪ್ರತಿಯೊಬ್ಬರು ತಮ್ಮ ಮನೆಗಳನ್ನು ಸ್ವಚ್ಚವಾಗಿಡುವುದರ ಜೊತೆಗೆ ಕಸ-ಕಡ್ಡಿಗಳನ್ನು ರಸ್ತೆಗೆ ಎಸೆಯುವುದು, ಬಹಿರ್ದೆಸೆ ಮಾಡುವುದಾಗಲಿ ಮಾಡಬಾರದು. ಒಣ ಕಸ, ಹಸಿ ಕಸ ಬೇರ್ಪಡಿಸಿ ಪಾಲಿಕೆಯ ಕಸದ ತೊಟ್ಟೆಯಲ್ಲಿಯೇ ಹಾಕಬೇಕು. ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ನಗರವನ್ನಾಗಿಸುವ ಸಂಕಲ್ಪ ಮಾಡಬೇಕಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸವರಾಜ ಹೆಳವರ ಯಾಳಗಿ, ಎಸ್.ಎಸ್.ಪಾಟೀಲ ಬಡದಾಳ, ದೀಪಕ ತಿವಾರಿ ಸೇರಿದಂತೆ ಹಲವರಿದ್ದರು.