ನೈರ್ಮಲ್ಯ ಕಾಪಾಡುವುದರಿಂದ ಸಾಂಕ್ರಾಮಿಕ ರೋಗಗಳು ದೂರ

ಕಲಬುರಗಿ:ನ.19: ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ, ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತ, ರಸ್ತೆಯ ಮೇಲೆ ಕಸ-ಕಡ್ಡಿ ಹಾಕುವುದು ಬೇಡ. ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು. ಬಯಲು ಶೌಚಕ್ಕೆ ತೆರಳದೆ, ಶೌಚಾಲಯಗಳನ್ನು ನಿರ್ಮಿಸಿಕೊಂಡು, ಅವುಗಳನ್ನು ಬಳಸಬೇಕು. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಶೌಚಾಲಯ (ನೈರ್ಮಲ್ಯ) ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಸ್ವಚ್ಛತೆ ಎಂಬುದು ನಿರಂತರವಾಗಿ ಜರುಗುವು ಕ್ರಿಯೆಯಾಗಬೇಕು. ಪ್ಲಾಸ್ಟಿಕ್ ಬಳಕೆಯಿಂದಾಗಿ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟು ಮಾಡುತ್ತದೆ. ಜನರ ಆರೋಗ್ಯ, ಪ್ರಾಣಿ-ಪಕ್ಷಿ ಸಂಕುಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಅದಕ್ಕೆ ಬದಲಾಗಿ ಪರ್ಯಾಯ ವಸ್ತುಗಳಾದ ಬಟ್ಟೆ ಮತ್ತು ಸೆಣಬಿನ ಚೀಲಗಳಂತಹ ವಸ್ತುಗಳನ್ನು ಬಳಸಬೇಕು. ಬಯಲು ಶೌಚಾಲಯದಿಂದ ಪರಿಸರ ಹಾಳಾಗುವದರ ಜೊತೆಗೆ, ಅನೇಕ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿ ಶೌಚಾಲಯ ಕೋಣೆಯನ್ನು ನಿರ್ಮಿಸಿಕೊಂಡು ಬಳಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆದು, ನೈರ್ಮಲ್ಯ ಕಾಪಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ವೀರೇಶ ಬೋಳಶೆಟ್ಟಿ ನರೋಣಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.