ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿ ಸಿದ್ದತೆ

ಶಿವಮೊಗ್ಗ. ಅ.೮; ಅರ್ಹತಾ ದಿನಾಂಕ 01.11.2023 ಕ್ಕೆ ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಎಲ್ಲ ಅರ್ಹ ಪದವೀಧರರು ಮತ್ತು ಶಿಕ್ಷಕರನ್ನು ಸೇರ್ಪಡೆಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹತಾ ದಿನಾಂಕ: 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಪದವೀಧರರಾದ ಪದವಿಪೂರ್ವ/ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಶಿಕ್ಷಕರು ಕನಿಷ್ಟ 3 ವರ್ಷ ಬೋಧನೆ ಮಾಡಿದ ಅನುಭವವುಳ್ಳವರಾಗಿರಬೇಕೆಂದರು.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಮೂನೆ 18 ರಲ್ಲಿ ಪದವೀಧರರ ಮತ್ತು ನಮೂನೆ 19 ರಲ್ಲಿ ಶಿಕ್ಷಕರ ಅರ್ಜಿಗಳನ್ನು ಭರ್ತಿ ಮಾಡಿ ನಗರ ಪ್ರದೇಶದಲ್ಲಿ ಮಹಾನಗರಪಾಲಿಕೆ ಮತ್ತು ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ್ ಕಚೇರಿಗೆ ತಲುಪಿಸಬೇಕು. ಸರ್ಕಾರಿ ಪದವಿಪೂರ್ವ ಶಿಕ್ಷಕರ ಕುರಿತು ದೃಢೀಕರಣವನ್ನು ಆಯಾ ಶೈಕ್ಷಣಿಕ ಸಂಸ್ಥೆ ಮುಖ್ಯಸ್ಥರು, ಖಾಸಗಿ ಪಿಯು ಶಿಕ್ಷಕರ ದೃಢೀಕರಣವನ್ನು ಡಿಡಿಪಿಯು ರವರು ಹಾಗೂ ಪದವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರ ದೃಢೀಕರಣವನ್ನು ಮಾಡಬೇಕು.  ಅರ್ಜಿಯೊಂದಿಗೆ ಶಿಕ್ಷಕರು/ಪದವೀಧರರ ಎಪಿಕ್ ಕಾರ್ಡ್ ಮತ್ತು ಆಧಾರ್ ಪ್ರತಿ ಕಡ್ಡಾಯವಾಗಿರುತ್ತದೆ. ಬೇರೆ ಜಿಲ್ಲೆಯವರು ಇಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಎಪಿಕ್ ಕಾರ್ಡ್‍ನ ವಿಳಾಸಕ್ಕೆ ಅರ್ಜಿಯನ್ನು ವರ್ಗಾಯಿಸಬೇಕು.ದಿನಾಂಕ: 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ (ಭಾವ ಚಿತ್ರದೊಂದಿಗೆ) ಹಾಗೂ ಶಿಕ್ಷಕರು ನಮೂನೆ 19 ರಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಅಥವಾ ಪ್ರಾವಿಜನಲ್ ಪದವಿ ಪ್ರಮಾಣ ಪತ್ರವನ್ನು ಜಿಲ್ಲೆಯ ಪತ್ರಾಂಕಿತ ಅಧಿಕಾರಿ ಅಥವಾ ನೋಟರಿಯವರಿಂದ ದೃಢೀಕರಿಸಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಸ್ವಯಂದೃಢೀಕರಿಅರ್ಜಿಯೊಂದಿಗೆ ದಿನಾಂಕ 06.11.2023 ಒಳಗಾಗಿ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸಿಲ್ದಾರ್ ಕಾರ್ಯಾಲಯದಲ್ಲಿ) ಸಲ್ಲಿಸಬೇಕು ಎಂದರು.  ಅರ್ಜಿ ತುಂಬುವ ಕುರಿತು ಹೆಚ್ಚಿನ ಮಾಹಿತಿಗೆ ಟಾಲ್‍ಫ್ರೀ ಸಂಖ್ಯೆ 1950 ಹಾಗೂ ಚುನಾವಣಾ ಶಾಖೆಯ ದೂ.ಸಂ: 08182-272282 ಸಂಪರ್ಕಿಸಬಹುದು ಎಂದರು.