ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಗಾರ
 ಪರೀಕ್ಷೆ ಎದುರಿಸುವ ಮಾರ್ಗದರ್ಶನ ಹೊಂದಿ: ಎಂ.ಚೆನ್ನಬಸಪ್ಪ


ಹೊಸಪೇಟೆ(ವಿಜಯನಗರ),ಜ.17- ವಿದ್ಯಾರ್ಥಿಗಳು ನೆನಪಿನ ಶಕ್ತಿ ವೃದ್ದಿಸಿಕೊಳ್ಳುವ ಮೂಲಕ ಪರೀಕ್ಷೆಯನ್ನು ಎದುರಿಸುವ ಬಗೆಯ ಬಗ್ಗೆ ಮಾರ್ಗದರ್ಶನ ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚೆನ್ನಬಸಪ್ಪ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಪ್ರೌಢ ಶಾಲಾ ಮುಖ್ಯಗುರುಗಳ ಸಂಘದ ಸಹಯೋಗದಲ್ಲಿ ರಾಣೆಬೆನ್ನೂರು ನಂದೀಶ್ವರ ನೈಪುಣ್ಯ ತರಬೇತಿ ಕೌಶಲ್ಯ ಸಂಸ್ಥೆಯಿಂದ ಸೋಮವಾರ ಮೇನ್‍ಬಜಾರ್‍ನ ಕೊಟ್ಟೂರು ಸ್ವಾಮಿ ಮಠದ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಕುರಿತಂತೆ ಹಮ್ಮಿಕೊಂಡಿದ್ದ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವ ಜೊತೆಗೆ ಪರೀಕ್ಷಾ ವೇಳೆ ಭಯ, ಚಂಚಲ ಮುಕ್ತ ಮನೋಭಾವದ ಜೊತೆಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಪರೀಕ್ಷೆ ವೇಳೆ ಸಮಯ ನಿರ್ವಹಣೆ ಬಹಳ ಮುಖ್ಯವಾಗಿದ್ದು ಪರೀಕ್ಷೆಯ ಮುನ್ನಾ ಹಾಗೂ ಪರೀಕ್ಷೆಯ ದಿನ ಅನುಸರಿಸಬೇಕಾದ ಸೂತ್ರಗಳ ಕುರಿತು ಮಾರ್ಗದರ್ಶನ ಹೊಂದಬೇಕು ಎಂದು  ಅವರು ತಿಳಿಸಿದರು.
ಶಿಕ್ಷಕರು ಬಿಡುವಿನ ವೇಳೆಯಲ್ಲಿ ವಿಶೇಷ ತರಗತಿಗಳು, ವಿಷಯವಾರು ಕ್ಲಬ್ ಕಾರ್ಯಗಾರಗಳು, ಪರೀಕ್ಷಾ ಮಂಡಳಿಯವರು ನೀಡಿರುವ ಪ್ರಶ್ನೆ ಪತ್ರಿಕೆಗಳ  ಮಾದರಿಗಳನ್ನು  ಅಭ್ಯಾಸ ಮಾಡಿಸಬೇಕು ಎಂದು ತಿಳಿಸಿದರು.
 ಪಾಲಕರ ಹಾಗೂ ಪೋಷಕರ ಸಭೆ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕರುಗಳಳಿಗೆ ದತ್ತು ನೀಡುವ ಯೋಜನೆಯನ್ನು ಕೈಗೊಳ್ಳಬೇಕು. ತಿಂಗಳ ಕಿರು ಪರೀಕ್ಷೆ, ರಸ ಪ್ರಶ್ನೆ ಕಾರ್ಯಕ್ರಮ, ವಾರದಲ್ಲಿ ಒಂದು ದಿನ ರಂಗೋಲಿ ಮೂಲಕ ವಿಜ್ಞಾನದಲ್ಲಿ ಬರುವ ಚಿತ್ರಗಳು ಹಾಗೂ ಸಮಾಜ ವಿಜ್ಞಾನದಲ್ಲಿ ಬರುವ ಭೂಪಟಗಳನ್ನು ರಚಿಸುವುದನ್ನು ಕಲಿಸಬೇಕು ಎಂದು ಹೇಳಿದರು.
ಶಿಬಿರದಲ್ಲಿ ಎರಡು ಅವಧಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.