ನೈತಿಕ ವ್ಯಕ್ತಿತ್ವಕ್ಕೆ ಪಂಚಮಂತ್ರ ನೀಡಿದ ರಸಋಷಿ ಕುವೆಂಪು- ಎಸ್.ಕೆ.ಬಿ ಪ್ರಸಾದ್

ಚಿತ್ರದುರ್ಗ.ಡಿ.೩೦: ನೈತಿಕ ವ್ಯಕ್ತಿತ್ವಕ್ಕೆ ಪಂಚಮಂತ್ರ ನೀಡಿದ ರಸಋಷಿ ಕುವೆಂಪುರವರು ವಿಶ್ವಮಾನವ ಸಂದೇಶ ನೀಡಿದ ಮಹಾಕವಿ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ನಗರದ ಡಯಟ್‌ನಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪುರವರು ಕನ್ನಡದಲ್ಲಿ ಮೊದಲನೆಯ ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪಪ್ರಶಸ್ತಿ ಪಡೆದಿದ್ದು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿದ ಆಶಯವೇ ವಿಶ್ವ ಮಾನವ ಸಂದೇಶವಾಗಿದೆ. ನಾವು ಸೌಹಾರ್ದತೆಯಿಂದ ಭ್ರಾತೃತ್ವ ಭಾವನೆಯಿಂದ ಬದುಕಲು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಪಂಚ ಮಂತ್ರಗಳನ್ನು ನೀಡಿದ ಅವರು ಸಣ್ಣಕಥೆ,ಕವಿತೆ,ಕಾದಂಬರಿ,ನಾಟಕ,ಮಹಾಕಾವ್ಯ,ಆತ್ಮಕಥೆ ಮುಂತಾದ ವಿವಿಧ  ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಗೈದಿದ್ದಾರೆ. ತಮ್ಮ ಮೇರು ಕೃತಿ ರಾಮಾಯಣದರ್ಶನಂ ನಲ್ಲಿ ಪ್ರಸ್ತುತ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಶಿಕ್ಷಕರು ಅವರ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಓದುವಂತೆ ಪ್ರೇರೇಪಿಸಬೇಕು ಎಂದರು.ಹಿರಿಯ ಉಪನ್ಯಾಸಕರಾದ ಬೋರೇಗೌಡ, ಮಂಜುಳಾ, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ, ಜಿ.ಎಸ್.ನಾಗರಾಜ್, ಎಸ್.ಬಸವರಾಜು, ಎನ್.ರಾಘವೇಂದ್ರ, ವಿ.ಕನಕಮ್ಮ, ಸಿ.ಎಸ್.ಲೀಲಾವತಿ ಉಪಸ್ಥಿತರಿದ್ದರು.ಫೋಟೋ: ನಗರದ ಡಯಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಚಾರ್ಯ ಎಸ್.ಕೆ.ಬಿ ಪ್ರಸಾದ್. ಉದ್ಘಾಟಿಸಿದರು.