ನೈತಿಕ ಆಚರಣೆಯೇ ನಿಜವಾದ ಧರ್ಮ: ಕಲ್ಮಠ

ಬಳ್ಳಾರಿ, ನ.1: ಧರ್ಮಗಳು ಅನಂತ. ಧಾರ್ಮಿಕ ಆಚರಣೆಗಳಾದ ಪೂಜೆ, ಜಪ, ತಪ, ಅರ್ಚನೆ ಇತ್ಯಾದಿಗಳು ನಾನಾವಿಧ. ಇವುಗಳ ಹೊರ ಆಚರಣೆಯೇ ಧರ್ಮವೆಂದು ಧಾರ್ಮಿಕ ಲಾಂಛನಗಳಾದ ವಿಭೂತಿ, ನಾಮ ಇತ್ಯಾದಿಗಳೇ ಸದ್ಗತಿಯ ಸಾಧನೆಗಳೆಂದು ನಂಬಲಾಗಿದೆ. ಇದು ತಪ್ಪು, ನಿಜವಾದ ಧರ್ಮ ಧರ್ಮದಲ್ಲಿ ಧರ್ಮ ಪ್ರವರ್ತಕರು ರೂಪಿಸಿದ ದೈನಂದಿನ ಬದುಕಿನ ನೈತಿಕ ಆಚರಣೆಗಳೇ ನಿಜವಾದ ಧರ್ಮಗಳಾಗಿವೆಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ನುಡಿದರು.
ಅವರು ನಿನ್ನೆ ಡಾ. ವೈ.ನಾಗೇಶಶಾಸ್ತ್ರಿಗಳ ಕಾಂಪೌಂಡಿನ ಶ್ರೀ ಮೃತ್ಯುಂಜಯ ಶಿವಾನುಭವ ಕುಟೀರದಲ್ಲಿ ಜರುಗಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 242ನೇ ಮಹಾಮನೆ ಡಾ. ವೈ.ನಾಗೇಶಶಾಸ್ತ್ರಿಗಳ ದತ್ತಿ ಕಾರ್ಯಕ್ರಮದಲ್ಲಿ ಪಂಡಿತ ವೈ.ನಾಗೇಶಶಾಸ್ತ್ರಿಗಳ ವಿರಚಿತ “ಪಂಚಾಚಾರ ಪ್ರಕಾಶಕೆ” ಎಂಬ ವಿಷಯ ಕುರಿತು ಮಾತನಾಡುತ್ತಾ, ಇಂದಿನ ಧಾರ್ಮಿಕ ಅಸಹಿಷ್ಣುತೆಗೆ ಮೂಲಕಾರಣ ಮಾನವನು ನೈತಿಕ ಆಚರಣೆಗಳನ್ನು ಬಿಟ್ಟು, ಕೇವಲ ಬಾಹ್ಯದ ತೋರಿಕೆಯಲ್ಲಿ ಬದುಕುತ್ತಿರುವುದೇ ಕಾರಣವಾಗಿದೆ. ಕಾರಣ ಶರಣರು ಸರ್ವಕಾಲಿಕವಾಗಿ ಮಾನವ ಆಚರಿಸಬಹುದಾದ ಏಳು ಆಚಾರಗಳನ್ನು ಹೇಳಿರುವರು. ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ಧರ್ಮಾಚಾರ ಮತ್ತು ಸರ್ವಾಚಾರ ಇವು ಸರ್ವ ಮಾನವರ ಏಳಿಗೆ ಮತ್ತು ಸಮಾಜದ ಕ್ಷೇಮಾಭಿವೃದ್ಧಿಗೆ ಕಾರಣವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವೈ.ನಾಗೇಶಶಾಸ್ತ್ರಿಗಳ ಟ್ರಸ್ಟ್‍ನ ಅಧ್ಯಕ್ಷ ಡಾ. ಹೆಚ್.ಮಲ್ಲಿಕಾರ್ಜುನಗೌಡರು, ವೈ.ನಾಗೇಶ ಶಾಸ್ತ್ರಿಗಳು ಕಾಡಿನಲ್ಲಿ ಅರಳಿದ ಕುಸುಮದಂತೆ ಬಳ್ಳಾರಿಯಲ್ಲಿ ಇದ್ದರು. ಮೈಸೂರು ಆಸ್ಥಾನ ವಿದ್ವಾಂಸರಾಗಿ, ಸಂಡೂರು ಸಂಸ್ಥಾನದ ವಿದ್ವಾಂಸರಾಗಿ ಕರ್ನಾಟಕದ ಮೊಟ್ಟಮೊದಲ ಸರ್ವದರ್ಶನ ತೀರ್ಥ ಪದವಿಯನ್ನು ಪಡೆದ ವಿದ್ವಾಂಸರಾಗಿದ್ದರು ಎಂದು ಸ್ಮರಿಸುತ್ತಾ, ಮಾನವನಿಗೆ ನೀತಿಯೇ ಭೂಷಣ ಎಂದರು.
ವಚನ ಪ್ರಾರ್ಥನೆ ಸ್ವರೂಪರಾಣಿ ಮಾಡಿದರು. ಅಮೋಘ ವಚನಗಳನ್ನು ಹಾಡಿದರು. ಭಕ್ತಿಸೇವೆಯನ್ನು ನಾಗರತ್ನಮ್ಮ ಸರ್ವಾನಂದಯ್ಯ ವಹಿಸಿದ್ದರು. ದತ್ತಿ ದಾನಿ ಮತ್ತು ದಾತೃಗಳನ್ನು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪನವರು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಜೋಳದರಾಶಿ ಪಂಪನಗೌಡರು, ರಮೇಶ್‍ಗೌಡ ಪಾಟೀಲ್, ವೈ.ಹನುಮಂತರೆಡ್ಡಿ, ಸುಮನ, ವನಜಾ, ಶಾಂತಕುಮಾರಿ, ಎಸ್.ಪಿ.ಹೊಂಬಳ ಮುಂತಾದವರು ಉಪಸ್ಥಿತರಿದ್ದರು.