ನೈಟ್ ಕರ್ಫ್ಯೂ ರದ್ದು

ಬೆಂಗಳೂರು, ಡಿ.24- ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಜಾರಿಗೂ ಮುನ್ನವೇ ವಾಪಸ್ ಪಡೆದುಕೊಂಡಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು.

ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕರ್ಫ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.