ನೈಜ ಸುದ್ದಿಗಳಿಗೆ ಒತ್ತು ನೀಡಿ: ಪರಮೇಶ್ವರ್

ಕೊರಟಗೆರೆ, ಜು. ೧೩- ಪತ್ರಕರ್ತರು ಸದಾ ಅನ್ವೇಷನೆ, ಉತ್ತಮ ಬರವಣಿಗೆಯೊಂದಿಗೆ ಸಮಾಜಕ್ಕೆ ನೈಜ ಸುದ್ದಿಗಳನ್ನು ನೀಡಿ ಮಾರ್ಗದರ್ಶಕ ರಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣ ಪತ್ರಕರ್ತರು ದಿನಚರಿ ಸುದ್ದಿಗೆ ಒತ್ತು ನೀಡುವುದರೊಂದಿಗೆ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳ ವರದಿಗಾರರು ವಿಶೇಷ ಲೇಖನ, ಪತ್ತೆದಾರಿ ಬರವಣಿಗೆಯೊಂದಿಗೆ ಜನರಿಗೆ ಹೊಸ ಅನ್ವೇಷಣಾ ಸುದ್ದಿಗಳನ್ನು ನೀಡಿದರೆ ಸಮಾಜದಲ್ಲಿ ಹಲವು ಬದಲಾವಣೆಗಳನ್ನು ತರಬಹದು. ಇದು ಗ್ರಾಮೀಣ ಪತ್ರಕರ್ತರು ಸಹ ತಮ್ಮ ಸ್ಥಾನದಲ್ಲಿ ಉನ್ನತೀಕರಣ ಹೊಂದಲು ಕಾರಣವಾಗುತ್ತದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಹಲವರು ಪತ್ರಿಕಾರಂಗದಲ್ಲಿ ಸಾಧನೆ ಮಾಡಿ ಉನ್ನತ ಪದವಿಯಲ್ಲಿದ್ದಾರೆ. ಸಂಪಾದಕರು, ಮಾಲೀಕರು ಹಿರಿಯ ಸುದ್ದಿ ಸಂಪಾದಕರಾಗಿದ್ದಾರೆ. ಅವರ ಆಲೋಚನೆಗಳನ್ನು ತಿಳಿಸಲು ವೇದಿಕೆ ಬೇಕು ಅದಕ್ಕಾಗಿ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಡೆಸಬೇಕು. ರಾಜ್ಯದ ದೇಶದ ಪ್ರತಿಭಾನ್ವಿತ ಸಂಪಾದಕರು ಹಿರಿಯ ಪತ್ರಕರ್ತರಿಂದ ಮಾರ್ಗದರ್ಶನ, ಸಮಾಲೋಚನೆ ನಡೆಸಿದಾಗ ಗ್ರಾಮೀಣ ವರದಿಗಾರರಲ್ಲಿ ಹೊಸ ಆಲೋಚನೆ ಮೂಡುತ್ತದೆ. ಈ ಬಗ್ಗೆ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ರವರಿಗೆ ತಿಳಿಸಲಾಗಿದ್ದು ನಮ್ಮ ಸಿದ್ದಾರ್ಥ ವಿದ್ಯಾ ಸಂಸ್ಥೆಯಲ್ಲಿಯೇ ಇದಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗುವುದು. ತುಮಕೂರು ಜಿಲ್ಲಾ ಪತ್ರಕರ್ತರ ಕ್ರೀಡಾಕೂಟವನ್ನು ಕೊರಟಗೆರೆ ಪತ್ರಕರ್ತರ ಸಂಘದಿಂದ ತಾಲ್ಲೂಕು ಕೇಂದ್ರದಲ್ಲೇ ಆಯೋಜಿಲು ಸಹಕಾರ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕ್ರೀಡಾಕೂಟ ಅಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್.ಮೂರ್ತಿ, ತಾಲ್ಲೂಕು ಸಂಘದ ನೂತನ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಉಪಾಧ್ಯಕ್ಷ ಹೆಚ್.ಎನ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಎ.ಆರ್.ಚಿದಂಬರ, ಕಾರ್ಯದರ್ಶಿ ಕೆ.ಎನ್.ಸತೀಶ್, ಖಜಾಂಚಿ ಕೆ.ಬಿ.ಲೋಕೇಶ್, ಹಿರಿಯ ಪತ್ರಕರ್ತರಾದ ವಡ್ಡಗೆರೆಉಮಾಶಂಕರ್, ಜಿ.ಎಂ.ಶಿವಾನಂದ್, ಡಿ.ಎಂ.ರಾಘವೇಂದ್ರ, ನಿರ್ದೇಶಕರುಗಳಾದ ಕೆ.ಆರ್.ತಿಮ್ಮರಾಜು, ಹರೀಶ್, ಕಾಮಯ್ಯ, ನಾಗೇಂದ್ರ, ಲಕ್ಷೀಶ್, ರಾಜು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.