
ಕಲಬುರಗಿ: ಮಾ.1:ಸಮಾಜದಲ್ಲಿ ಎಲೆ-ಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರಿದ್ದಾರೆ. ಅವರ ಸೇವೆ, ಕೊಡುಗೆಯನ್ನು ಗುರ್ತಿಸಿ, ಪ್ರಶಸ್ತಿ, ಪುರಸ್ಕಾರ ನೀಡುವುದರಿಂದ ಪ್ರಶಸ್ತಿಗೆ ಮತ್ತು ಪಡೆದವರಿಗೆ ಕೂಡಾ ಗೌರವ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
ಇಂಟರನ್ಯಾಶನಲ್ ಹ್ಯೂಮನ್ ಡೆವೆಲಪಮೆಂಟ್ ಯುನಿವರ್ಸಿಟಿ ವತಿಯಿಂದ ಶೈಕ್ಷಣಿಕ ಕ್ಷೇತ್ರದ ಗೌರವ ಡಾಕ್ಟರೇಟ್ ಪದವಿ ಪುರಸ್ಕøತ ಡಾ.ಸತೀಶ್ ಟಿ.ಸಣಮನಿ ಅವರಿಗೆ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ನಗರದ ಜೆ.ಆರ್ ನಗರದಲ್ಲಿರುವ ಕೊಹಿನೂರ ಸಭಾಂಗಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಸತೀಶ್ ಟಿ.ಸಣಮನಿ, ಕಳೆದ ಮೂರು ದಶಕಗಳಿಂದ ಕೊಹಿನೂರ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ. ಕಂಪ್ಯೂಟರ ಜ್ಞಾನ ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯಕವೆಂದು ಮನಗಂಡು ಬಹಳ ವರ್ಷಗಳ ಹಿಂದೆಯೇ ಕಂಪ್ಯೂಟರ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸಲಾಗಿದೆ. ನಮ್ಮ ಸಂಸ್ಥೆಯಿಂದ ಟಿ.ವಿ, ರೆಡಿಯೋ, ಎಲೆಕ್ಟ್ರಾನಿಕ್ಸ್ ಸಾಧನಗಳ ರಿಪೇರಿ ತರಬೇತಿಯನ್ನು ಪಡೆದ ಸಾವಿರಾರು ಜನರು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರ ಅದರಲ್ಲಿ ವಿಶೇಷವಾಗಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಎಲ್ಲೆಡೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ಮನಗಂಡ ವಿಶ್ವವಿದ್ಯಾಲಯ ನನಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು, ಇದು ನಮ್ಮ ಸಂಸ್ಥೆಯ ಎಲ್ಲಾ ಸಾಧಕರು ಮತ್ತು ನಮ್ಮ ಸೇವೆಗೆ ಸಹಕರಿಸಿದ ಎಲ್ಲಾ ಸಹೃದಯರಿಗೆ ಅರ್ಪಿಸುತ್ತೇನೆ ಎಂದು ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ರಾಜಶೇಖರ ಬಿ.ಮರಡಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಭೀಮಾಶಂಕರ ಘತ್ತರಗಿ, ದತ್ತು ಹಡಪದ, ಇಸ್ಮೈಲ್ ಅತ್ತಾರ, ಸುನಿತಾ ಎಸ್.ಸಣಮನಿ, ಸಚಿನ್, ಸೋನಿಕಾ ಎಸ್.ಸಣಮನಿ, ಸಾರಿಕಾ, ಸಾಯಿಪ್ರಸಾದ ಸೇರಿದಂತೆ ಮತ್ತಿತರರಿದ್ದರು.