ನೈಜ ಸಮಾಜ ಸೇವಕರು ರಾಷ್ಟ್ರದ ಅಭಿವೃದ್ಧಿಯ ರೂವಾರಿಗಳು

ಕಲಬುರಗಿ:ಮಾ.19: ಸ್ವಾರ್ಥತೆಯೆ ಪ್ರಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಂತ ಬೆಲೆಯುಳ್ಳ, ಅಪರೂಪದ್ದು ಎಂದರೆ ಸಮಾಜ ಸೇವೆ. ಸಮಾಜದಲ್ಲಿರುವ ಅವಶ್ಯಕತೆಯಿರುವವರು, ಅಸಹಾಯಕರಿಗೆ ಸೇವೆ ನೀಡುವುದು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣದ ಬಗ್ಗೆ ಜನಜಾಗೃತಿ, ಮಹನೀಯರ ಸಂದೇಶ ಸಮಾಜಕ್ಕೆ ಮುಟ್ಟಿಸುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುವ ನೈಜ ಸಮಾಜ ಸೇವಕರು ರಾಷ್ಟ್ರದ ಅಮೂಲ್ಯ ಆಸ್ತಿ ಮತ್ತು ಅಭಿವೃದ್ಧಿಯ ರೂವಾರಿಯಾಗಿದ್ದು, ಅವರ ಪಾತ್ರ ಅನನ್ಯವಾಗಿದೆ ಎಂದು ಸಮಾಜ ಸೇವಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಸಮಾಜ ಸೇವಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾನೆಯೋ, ಪ್ರತಿಭಾವಂತರು, ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ, ಪ್ರೋತ್ಸಾಹ ನೀಡುವುದು ಸಮಾಜ ಸೇವಕರ ಕರ್ತವ್ಯವಾಗಿದೆ. ಸಮಾಜದಲ್ಲಿರುವ ನಿಸ್ವಾರ್ಥ ಸಮಾಜ ಸೇವಕರನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ. ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 7 ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಿದ್ದು, ಅದು ಇಲ್ಲಿಯವರೆಗೆ ಐತಿಹಾಸಿಕ, ಗಿನ್ನೀಸ್ ದಾಖಲೆ ಎಂಬಂತೆ 3658 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಸಲ್ಲಿಸಿದೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಆಹಾರ, ನೀರು, ಮಜ್ಜಿಗೆ, ಮಾಸ್ಕ್, ಸಾನಿಟೈಸರ್ ವಿತರಣೆ, ಕೋವಿಡ್ ಜಾಗೃತಿಯ ಕೆಲಸವನ್ನು ಮಾಡಿದೆ. ಬಳಗವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಮುಂದೆಯೂ ಕೂಡಾ ಹೀಗೆ ಸಮಾಜ ಸೇವೆಯನ್ನು ನಿರಂತರವಾಗಿ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಪೂಜಾ ಚವ್ಹಾಣ, ಸಾನಿಯಾ ಶೇಖ್, ಶೃತಿ ಚವ್ಹಾಣ, ಲಕ್ಷ್ಮೀ ಸುತಾರ, ಪ್ರಮುಖರಾದ ಈರಮ್ಮ ಕಾರಬಾರಿ, ಅನಿತಾ ಸುತಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.