ನೈಜ ಪರಿಶಿಷ್ಟ ಜಾತಿಯವರಿಗೆ ಸಿಕ್ಕ ಜಯ – ರವೀಂದ್ರನಾಥ ಪಟ್ಟಿ

ಜಾತಿ ಪ್ರಕರಣ : ರೇಣುಕಮ್ಮ, ತಹಸೀಲ್ ಅಧಿಕಾರಿ ವಿರುದ್ಧ ಕ್ರಿಮಿನಲ್ ದೂರು
ರಾಯಚೂರು.ಅ.31- ನಗರಸಭೆ ಸದಸ್ಯೆ ರೇಣುಕಮ್ಮ ಅವರ ಜಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಮ್ಮ ಹಾಗೂ ಪಂಚರು, ಇವರಿಗೆ ಕುಮ್ಮಕ್ಕು ನೀಡಿದವರು ಹಾಗೂ ಪ್ರಮಾಣ ಪತ್ರ ನೀಡಿದ ತಹಶೀಲ್ ಕಚೇರಿಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರವೀಂದ್ರನಾಥ ಪಟ್ಟಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಗರಸಭೆ ವಾರ್ಡ ನಂ. 31 ಸಿಯಾತಲಾಬ್ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, ನಕಲಿ ಜಾತಿ ಪ್ರಮಾಣಪತ್ರ ಪಡೆದು ಚುನಾವಣೆಯಲ್ಲಿ ಆಯ್ಕೆಯಾದ ರೇಣುಕಮ್ಮ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಸಿಲ್ ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
2018 ರಲ್ಲಿ ರಾಯಚೂರು ನಗರಸಭೆಗೆ ಪರಿಶಿಷ್ಟ ಕೋಟಾದಡಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಕ್ರಮ ಸಂ : 96 ರ ಶಿಳ್ಳೆಕ್ಯಾತರ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರರ ರಾಯಚೂರು ಇವರಿಂದ ಪಡೆದು ನಗರಸಭೆ ಸದಸ್ಯರಾಗಿ ಅಕ್ರಮವಾಗಿ ಆಯ್ಕೆಯಾಗಿದ್ದು, ಇವರು ಚುನಾಯಿತರಾಗಿ ಆಯ್ಕೆಯಾಗಿರುವ ದಿನಾಂಕ 03-09-2018 ರಂದು ಚುನಾವಣಾಧಿಕಾರಿಗಳು ಚುನಾವಣೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಇವರ ಚುನಾಯಿತರಾಗಿರುವ ಬಗ್ಗೆ ದಿನಾಂಕ 10-09-2019 ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಆದರೆ ಇವರು ಮೂಲತಃ ಹಿಂದುಳಿದ ವರ್ಗಗಳ ಪ್ರವರ್ಗ-1ರ ಕಿಳ್ಳೆಕ್ಯಾತರ ಜಾತಿಗೆ ಸೇರಿದವರಾಗಿದ್ದು, ಸುಳ್ಳು ಹೇಳಿಕೆ ನೀಡಿ ಶಿಳ್ಳೆಕ್ಯಾತರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದು ನಗರಸಭೆಗೆ ಚುಣಾವಣೆಯಲ್ಲಿ ಆಯ್ಕೆಯಾಗಿದ್ದು, ಇವರು ವಿರುದ್ದ ಕ್ರಮ ಕೈಗೊಳ್ಳುವಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಪರ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿತ್ತು.
ಅಡಿಷನಲ್ ಡೈರೆಕ್ಟರ್ ಜನರ್‌ಲ್ ಆಫ್ ಪೊಲೀಸ್ ಅವರ ಆದೇಶದನ್ವಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಾತಿ ಪರಿಶೀಲನೆ ಸಮಿತಿಯು ರೇಣುಕಮ್ಮ ಕೂಲಂಕುಷವಾಗಿ ಪರಿಶೀಲಿಸಿ 9 ವಿಚಾರಣೆಗಳನ್ನು ನಡೆಸಿ, ವಾದ ವಿವಾದಗಳನ್ನು ಆಲಿಸಿದ ನಂತರ ಸುಳ್ಳು ಜಾತಿ ಪ್ರಮಾಣ ಎಂದು ಆದೇಶ ನೀಡಿದ್ದಾರೆ. ಇದರಲ್ಲಿ ನಾನಾಗಲಿ ಅಥವಾ ಜಿಲ್ಲಾಧಿಕಾರಿಗಳಿಗೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿಲ್ಲ ಮತ್ತು ಇದರಲ್ಲಿ ಯಾವುದೇ ರಾಜಕೀಯ ಮುಖಂಡರ ಹಸ್ತಕ್ಷೇಪವಿಲ್ಲ ಎಂದರು.
ಅ.23 ರಂದು ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ರೇಣುಕಮ್ಮ ಅವರು ಕಲಬುರಗಿ ಕೈ ಕೋರ್ಟಿನಲ್ಲಿ ರಿಟ್ ದಾಖಸಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆನೀಡಬೇಕೆಂದು ಕೋರಿದ್ದು, ಆದರೆ ಹೈ ಕೋರ್ಟ್‌ನಲ್ಲಿ ತಡೆಯಾಜ್ಞೆ ನೀಡದೇ ಈ ಕುರಿತು ಸಮಕ್ಷಮ ಪ್ರಾಧಿಕಾರಿದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಸಹಾಯಕ ಆಯುಕ್ತರು ನಗರಸಭೆ ಚುನಾವಣೆಯಲ್ಲಿ ಭಾಗವಹಿಸಲು ಅವರಿಗೆ ನೋಟಿಸ್ ನೀಡಿದ್ದರು, ನಂತರ ಕಲಬುರಗಿಯ ಸಮಕ್ಷಮ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತ ಅ.29 ರಂದು ರೇಣುಕಮ್ಮ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದು, ಅವರ ಸದಸ್ಯತ್ವವನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಆದೇಶದನ್ವಯ ಅ.30 ರಂದು ರೇಣುಕಮ್ಮ ಅವರಿಗೆ ನೀಡಿದ್ದ ನಗರಸಭೆಯ ಚುನಾವಣೆಯ ನೋಟಿಸನ್ನು ಹಿಂಪಡೆದಿದ್ದಾರೆ.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಮುಂದೆ ಇಂತಹದೇ ಶಿಕ್ಷೆಯಾಗುತ್ತದೆ ಹಾಗು ಅಂತಹವರಿಗೆ ಈ ಪ್ರಕರಣವು ಎಚ್ಚರಿಕೆ ಘಂಟೆಯಾಗಿದ್ದು, ಇದು ನೈಜ ಪರಿಶಿಷ್ಟ ಜಾತಿಯವರಿಗೆ ಸಿಕ್ಕ ನ್ಯಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವನಾಥ ಪಟ್ಟಿ, ಎಂ.ಈರಣ್ಣ, ನರಸಿಂಹಲು ನೆಲಹಾಳ, ಮಹೇಶ ಮತ್ತು ಬಸವರಾಜ ಉಪಸ್ಥಿತರಿದ್ದರು.