ನೈಜ ಪತ್ರಕರ್ತರು ನಕಲಿ ಸಂಘಟನೆಗಳಿಗೆ ಮೋಸ ಹೋಗದಿರಿ

ಬೀದರ್:ಜ.16: ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಿ ಸಮಾನವಾಗಿ ಸ್ವತಂತ್ರ ಪೂರ್ವದಿಂದಲೂ ಈ ನಾಡಿನ ಪತ್ರಕರ್ತರ ಶಕ್ತಿಯಾಗಿ ನಿಂತಿರುವ ಏಕೈಕ ಸಂಘಟನೆ ಎಂದರೆ ಅದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾತ್ರ.

ಆದರೆ ಇಂದು ಕೆಲವು ನಕಲಿ ಸಂಘಟನೆಗಳು ಹುಟ್ಟಿಕೊಂಡು ಪತ್ರಕರ್ತರನ್ನು ದಾರಿ ತಪ್ಪಿಸಲು ಹೊರಟಿರುವುದು ದುಸ್ಸಾಹಸದ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಸಂಘಟನೆ ಹುಟ್ಟು ಹಾಕಿರುವ ಬಂಗ್ಲೆ ಮಲ್ಲಿಕಾರ್ಜುನ್ ಎಂಬುವರು ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ನಿಂತು ಹೀನಾಯವಾಗಿ ಸೋತಿರುವುದು ಇಡೀ ನಾಡಿಗೆ ಗೊತ್ತು. ಅಂತದರಲ್ಲಿ ಒಂದು ನಕಲಿ ಸಂಘಟನೆ ಹುಟ್ಟು ಹಾಕಿ ನೈಜ ಪತ್ರಕರ್ತರನ್ನು ದಾರಿ ತಪ್ಪಿಸಲು ಹೊರಟಿರುವ ಅವರು, ತಮ್ಮ ಸಂಘಟನೆಗೆ ಸದಸ್ಯತ್ವ ಪಡೆಯಲು ಮುಂದಾಗಿರುವುದು ವಿಪರ್ಯಾಸ.

ಈಗಾಗಲೇ ರಾಜ್ಯದಲ್ಲಿ ಸುಮಾರು 10 ಸಾವಿರ ಗಡಿ ದಾಟಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಬೀದರ್ ಜಿಲ್ಲೆಯಲ್ಲಿ 188 ಸದಸ್ಯರನ್ನು ಹೊಂದಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಅಥವಾ ಸಂಪಾದಕರ ಸಂಘ ಅಥವಾ ಇತರೆ ಯಾವುದೇ ಸಂಘಟನೆಗೆ ಸದಸ್ಯರಾದರೆ ತಮ್ಮನ್ನು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದಿಂದ ಮೂಲಾಜಿಲ್ಲದೇ ವಜಾಗೊಳಿಸಲಾಗುವುದೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.