ನೈಜರ್ ಸೇನಾಡಳಿತದ ಜೊತೆ ಅಮೆರಿದ ಚರ್ಚೆ

ನಿಯಾಮೆ (ನೈಜರ್), ಆ.೮- ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಮಿಲಿಟರಿ ಅಧಿಕಾರ ವಹಿಸಿಕೊಂಡಂದಿನಿಂದ ನೈಜರ್‌ನಲ್ಲಿ ಯುರೋಪಿಯನ್ ವಿರುದ್ಧ ಅದರಲ್ಲೂ ಫ್ರಾನ್ಸ್ ವಿರುದ್ಧ ಆಕ್ರೋಶ ಮುಗಿಲುಮುಟ್ಟಿದೆ. ಈ ನಡುವೆ ನೈಜರ್‌ನ ಸೇನಾಡಳಿತ ಜೊತೆ ಅಮೆರಿಕಾ ರಾಜತಾಂತ್ರಿಕ ಅಧಿಕಾರಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಉಪ ಕಾರ್ಯದರ್ಶಿ ವಿಕ್ಟೋರಿಯಾ ನುಲ್ಯಾಂಡ್, ಮಿಲಿಟರಿ ನಾಯಕರ ಜೊತೆಗೆ ನಾವು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ಇದು ಅತ್ಯಂತ ಕಠಿಣತೆಯಿಂದ ಕೂಡಿತ್ತು. ನೈಜರ್‌ನ ಹೊಸ ಮಿಲಿಟರಿ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಮೌಸಾ ಸಲಾವು ಬಾರ್ಮೌ ಅವರನ್ನು ಭೇಟಿಯಾಗಿದ್ದೇನೆ. ಆದರೆ ನೈಜರ್‌ನ ಸ್ವಯಂ ಘೋಷಿತ ಹೊಸ ನಾಯಕ ಜನರಲ್ ಅಬ್ದುರಾಹಮಾನೆ ಟಿಚಿಯಾನಿ ಅಥವಾ ಬಜೂಮ್ ಅವರನ್ನು ಭೇಟಿಯಾಗಿಲ್ಲ. ಇನ್ನು ನೈಜರ್‌ಗೆ ಸಂಬಂಧಿಸಿದ ವ್ಯಕ್ತಿಗಳು ಸಾಂವಿಧಾನಿಕ ನೀತಿಗೆ ಮರಳುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದರೆ ಅಮೆರಿಕಾ ಸಹಾಯ ನೀಡಲು ತಯಾರಿದೆ. ಆದರೆ ಆ ಪ್ರಸ್ತಾಪವನ್ನು ನಾವು ಯಾವುದೇ ರೀತಿಯಲ್ಲಿ ತೆಗೆದುಕೊಂಡಿದ್ದೇವೆ ಎಂದು ನಾನು ಹೇಳುವುದಿಲ್ಲ. ಅಲ್ಲದೆ ಸ್ಥಿರತೆ ಸ್ಥಾಪಿಸುವ ನಿಟ್ಟಿನಲ್ಲಿ ನೈಜರ್‌ನ ಸೇನಾಡಳಿತವು ರಷ್ಯಾದ ಬಾಡಿ ಸೈನ್ಯ ದಳ ವ್ಯಾಗ್ನರ್‌ನಿಂದ ಸಹಾಯ ಪಡೆದಿದೆ ಎಂಬ ಆರೋಪದ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಒಂದು ವೇಳೆ ವ್ಯಾಗ್ನರ್ ಮಧ್ಯಪ್ರವೇಶಿಸಿದರೆ ಸಾರ್ವಭೌಮತೆಗೆ ಯಾವ ರೀತಿ ಧಕ್ಕೆಯಾಗಲಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ನೈಜರ್‌ನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಪಶ್ಚಿಮ ಆಫ್ರಿಕಾದ ದೇಶಗಳು ಗುರುವಾರ ಸಭೆ ಸೇರಲಿವೆ. ಅಲ್ಲದೆ ಅಧಿಕಾರದಿಂದ ಕೆಳಗಿಳಿದು ಚುನಾಯಿತ ಅಧ್ಯಕ್ಷರನ್ನು ಪುನಃ ನೇಮಿಸುವಂತೆ ಪಶ್ಚಿಮ ಆಫ್ರಿಕಾದ ೧೫ ರಾಷ್ಟ್ರಗಳ ವ್ಯಾಪಾರ ಗುಂಪು (ಇಕೊವಾಸ್) ಇದೀಗ ಅಲ್ಲಿನ ಸೇನಾನಾಯಕರಿಗೆ ಭಾನುವಾರದ ತನಕ ಗಡುವು ನೀಡಿದೆ.