ನೈಜರ್ ವಿರುದ್ಧ ಯುದ್ದಕ್ಕೆ ಇಕೊವಸ್ ಸಿದ್ಧತೆ

ನಿಯಾಮೆ (ನೈಜರ್), ಆ.೧೨- ನೈಜರ್ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಪಣತೊಟ್ಟಿರುವ ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಸಂಘಟನೆ, ಪಾಶ್ಚಿಮಾತ್ಯ ದೇಶಗಳ ಬೆಂಬಲದ ಇಕೊವಸ್’ ಇದೀಗ ಸೇನೆಯನ್ನು ಸನ್ನದ್ಧಗೊಳಿಸಿದೆ. ಆದರೆ ಇಕೊವಸ್ ನಿರ್ಧಾರದ ವಿರುದ್ಧ ನೈಜರ್ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿದರೆ ಬಂಧನದಲ್ಲಿರುವ ಅಧ್ಯಕ್ಷ ಬಝೌಮ್ ಹತ್ಯೆ ಮಾಡುವುದಾಗಿ ಸೇನಾಡಳಿತ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ನೈಜರ್‌ನಲ್ಲಿ ಉದ್ವಿಗ್ನತೆ ಹೆಚ್ಚಿದೆ.
ಪದಚ್ಯುತ ಅಧ್ಯಕ್ಷ ಮುಹಮ್ಮದ್ ಬಜೌಮ್ ಅವರನ್ನು ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ನೇಮಿಸುವ ನಿಟ್ಟಿನಲ್ಲಿ ಇಕೊವಸ್ ನೀಡಿರುವ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ನೈಜರ್‌ನಲ್ಲಿ ಸಂವಿಧಾನದ ಮರುಸ್ಥಾಪನೆಗೆ ಮೀಸಲು ಪಡೆಯನ್ನು ನಿಯೋಜಿಸಲಾಗುವುದು ಎಂದು ಪಶ್ಚಿಮ ಆಫ್ರಿಕನ್ ರಾಜ್ಯಗಳ ಆರ್ಥಿಕ ಸಂಘಟನೆ (ಇಕೊವಸ್) ಹೇಳಿದೆ. ೧೫ ಸದಸ್ಯ ರಾಷ್ಟ್ರಗಳ‘ಇಕೊವಸ್’ನ ಮೀಸಲು ಪಡೆ ಎಲ್ಲಿ, ಯಾವಾಗ ನಿಯೋಜನೆಗೊಳ್ಳಲಿದೆ ಮತ್ತು ಈ ಪಡೆಯ ಬಲವೆಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ನೈಜೀರಿಯಾ ನೇತೃತ್ವದಲ್ಲಿ ೫,೦೦೦ ಯೋಧರ ತುಕಡಿ ಕೆಲ ವಾರಗಳಲ್ಲೇ ಸಿದ್ಧಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ನೈಜೀರಿಯಾ ಮತ್ತು ಬೆನಿನ್ ಜತೆ ತಮ್ಮ ದೇಶವೂ ಮೀಸಲು ಪಡೆಗೆ ಯೋಧರನ್ನು ರವಾನಿಸಲಿದೆ ಎಂದು ಐವರಿಕೋಸ್ಟ್ ಅಧ್ಯಕ್ಷ ಅಲಾಸ್ಸೆನ್ ಖಟಾರಾ ಘೋಷಿಸಿದ್ದಾರೆ. ನಾವು ಬಝೌಮ್ ಅವರ ಮರುಸ್ಥಾಪನೆಗೆ ಬದ್ಧವಾಗಿದ್ದೇವೆ. ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನಮ್ಮ ಉದ್ದೇಶವಾಗಿದೆ ಎಂದವರು ಹೇಳಿದ್ದಾರೆ. ಇಕೊವಸ್’ನ ನಿರ್ಧಾರಗಳನ್ನು ಬಲವಾಗಿ ಬೆಂಬಲಿಸುವುದಾಗಿ ಆಫ್ರಿಕನ್ ಒಕ್ಕೂಟ ಹೇಳಿದ್ದು, ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಲ್ಬಣಿಸದಂತೆ ಸೇನಾಡಳಿತಕ್ಕೆ ಕರೆ ನೀಡಿದೆ. ನೈಜರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯ ಯಾವುದೇ ನಿರ್ಧಾರಗಳಿಗೆ ತನ್ನ ಬೆಂಬಲವಿದೆ ಎಂದು ಫ್ರಾನ್ಸ್ ಹೇಳಿದೆ.