ವಾಪಾಸ್ಸಿಗೆ ಫ್ರಾನ್ಸ್ ನಿರ್ಧಾರ ನೈಜರ್, ಸೆ.೨೫- ಒಂದು ಕಾಲದಲ್ಲಿ ತನ್ನ ವಸಾಹತು ದೇಶವಾಗಿದ್ದ ನೈಜರ್‌ನಲ್ಲಿ ಸದ್ಯ ಸೇನಾಡಳಿತ ಅಧಿಕಾರ ವಶಕ್ಕೆ ಪಡೆದ ಬಳಿಕ ಚಿತ್ರಣ ಸಂಪೂರ್ಣ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಸದ್ಯದಲ್ಲೇ ನೈಜರ್‌ನಿಂದ ರಾಯಭಾರಿ ಹಾಗೂ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ತಿಳಿಸಿದ್ದಾರೆ. ಸಹಜವಾಗಿಯೇ ಮ್ಯಾಕ್ರನ್ ಕ್ರಮವನ್ನು ನೈಜರ್ ಸೇನಾಡಳಿತ ಸ್ವಾಗತಿಸಿದೆ.
ಫ್ರಾನ್ಸ್ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ. ಮುಂದಿನ ಗಂಟೆಗಳಲ್ಲಿ ನಮ್ಮ ರಾಯಭಾರಿ ಮತ್ತು ಹಲವಾರು ರಾಜತಾಂತ್ರಿಕರು ಫ್ರಾನ್ಸ್‌ಗೆ ಹಿಂತಿರುಗುತ್ತಾರೆ. ನೈಜರ್ ಸರ್ಕಾರದೊಂದಿಗಿನ ಮಿಲಿಟರಿ ಸಹಕಾರವು ಅಂತ್ಯಗೊಂಡಿದ್ದು, ಮುಂಬರುವ ತಿಂಗಳುಗಳಲ್ಲಿ ನಮ್ಮ ಮಿಲಿಟರಿ ಪಡೆಗಳು ದೇಶಕ್ಕೆ ಮರಳಲಿದೆ ಎಂದು ಮ್ಯಾಕ್ರನ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಜರ್ ಸೇನಾಡಳಿತ, ಈ ಭಾನುವಾರ ನಾವು ನೈಜರ್‌ನ ಸಾರ್ವಭೌಮತ್ವದ ಕಡೆಗೆ ಹೊಸ ಹೆಜ್ಜೆಯನ್ನು ಆಚರಿಸುತ್ತೇವೆ ಎಂದು ತಿಳಿಸಿದೆ. ಸದ್ಯ ನೈಜರ್‌ನಲ್ಲಿ ಸುಮಾರು ೧,೫೦೦ ಫ್ರೆಂಚ್ ಸೈನಿಕರು ಇದ್ದು, ಆದರೆ ಕಳೆದ ಜುಲೈನಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಕೊನೆಗೊಳಿಸಿ, ಸೇನಾಡಳಿತ ಅಧಿಕಾರಕ್ಕೆ ಬಂದಿತ್ತು. ಈ ಬಳಿಕ ನೈಜರ್‌ನಲ್ಲಿರುವ ಫ್ರಾನ್ಸ್ ಸೇನೆ ವಿರುದ್ಧ ಆಕ್ರೋಶ ಮೂಡಿದ್ದು, ದೇಶ ಬಿಟ್ಟು ತೆರಳುವಂತೆ ಆಗ್ರಹ ವ್ಯಕ್ತವಾಗಿತ್ತು. ಅದೂ ಅಲ್ಲದೆ ನಾಗರಿಕರು ಕೂಡ ಸೇನೆಯ ಜೊತೆಗೂಡಿ ಫ್ರಾನ್ಸ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ಕೊನೆಗೂ ಎಲ್ಲಾ ಒತ್ತಡಗಳಿಗೆ ಮಣಿದು, ಫ್ರಾನ್ಸ್ ತನ್ನ ಸೇನೆಯನ್ನು ಹಿಂಪಡೆಯಲು ನಿರ್ಧರಿಸಿದೆ.