ನೇಹಾ ಹಿರೇಮಠ ಕೊಲೆ ಪ್ರಕರಣ ರಾಜಕೀಯವಾಗಿ ಬಳಸದಿರಿ : ರಾಠೋಡ

ಸಂಜೆವಾಣಿ ವಾರ್ತೆ
ಔರಾದ :ಏ.25: ಹುಬ್ಬಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ನೀಡಿ, ಇಂತಹ ಕೃತ್ಯ ಎಸಗದಂತೆ ಕ್ರಮ ವಹಿಸಿ ಅದನ್ನು ಬಿಟ್ಟು ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ ಎಂದು ಗೋರ್ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ಬಾಳುಸಾಹೇಬ ರಾಠೋಡ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಹೋದರಿ ನೇಹಾ ಹಿರೇಮಠ ಕೊಲೆ ಅಮಾನವೀಯ ಕೃತ್ಯ, ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಹೋದರಿಯ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ, ಕೆಲವರು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ, ಅಪರಾಧಿಗಳಿಗೆ ಯಾವುದೇ ಜಾತಿ ಇರುವುದಿಲ್ಲ ಇಂತಹ ಕೃತ್ಯಗಳನ್ನು ಮಾಡುವುದೇ ಅವರ ಜಾತಿ. ಅದು ಯಾವುದೇ ಪಕ್ಷ ಇರಲಿ ಒಲೈಕೆ ರಾಜಕೀಯ, ಜಾತಿ ರಾಜಕೀಯ ಬಿಟ್ಟು ಮನೆ ಮಗಳಂತೆ ತಿಳಿದು ನ್ಯಾಯ ಒದಗಿಸಿ ಕೊಡಬೇಕು. ಜ್ಞಾನ ದೇಗುಲದಲ್ಲಿ ನುಗ್ಗಿ ರಾಜಾರೋಷವಾಗಿ ಕೊಲೆ ಮಾಡುತ್ತಾನೆ ಅಂದ್ರೆ ನಮ್ಮ ವ್ಯವಸ್ಥೆ ಎಷ್ಟು ಹಳ್ಳ ಹಿಡಿದಿದೆ ಎಂಬುದು ತಿಳಿಯುತ್ತದೆ, ರಾಜಕೀಯ ಕುತಂತ್ರದಿಂದಲೇ ಇಂತಹ ಇಂತಹ ಅಪರಾಧಗಳು ಹುಟ್ಟಿ ಕೊಳ್ಳುತ್ತಿವೆ, ಸರ್ಕಾರ ಇಂತಹ ಆರೋಪಿಗಳಿಗೆ ಎನ್ಕೌಂಟರ್, ಗಲ್ಲುಶಿಕ್ಷೆ, ಮರಣದಂಡನೆ ಅಂತಹ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಅಂದಾಗ ಮಾತ್ರ ಇಂತಹ ಅಪರಾಧಗಳು ನಿಲ್ಲುತ್ತವೆ ಎಂದು ಆಗ್ರಹಿಸಿದರು.
ಆರೋಪಿಗೆ ಕಠಿಣ ಶಿಕ್ಷೆ ವಿಧಿಸದೆ ಇದ್ದಲ್ಲಿ ಇಂತಹ ಅಪರಾಧಿಗಳು ಹುಟ್ಟುಕೊಳ್ಳುತ್ತಲೆ ಇರುತ್ತಾರೆ, ಅದಕ್ಕೆ ನೇರ ಹೊಣೆಗಾರಿಕೆ ಸರ್ಕಾರ ಹಾಗೂ ರಾಜಕೀಯ ನಾಯಕರು ಕಾರಣರಾಗುತ್ತಾರೆ. ನಿಮಗೆ ರಾಜಕಾರಣ ಮಾಡುವುದೇ ಆದರೆ ಬೇರೆಡೆ ಮಾಡಿ ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಇಲ್ಲವಾದಲ್ಲಿ ಗೋರ ಸೇನಾ ಸಂಘಟನೆ ಹಾಗೂ ರಾಜ್ಯದ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲಾಗುವುದು ಎಂದು ಬಾಳುಸಾಹೇಬ ರಾಠೋಡ ಎಚ್ಚರಿಸಿದರು.