ನೇಹಾ ಹತ್ಯೆ ಹೇಳಿಕೆ ಪರಂ ವಿಷಾದ

ಬೆಂಗಳೂರು, ಏ. ೨೦:ಹುಬ್ಬಳ್ಳಿಯ ಯುವತಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಹುಬ್ಬಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಿಲ್ಲ ಎಂದು ಹೇಳಿದರು.ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಬಂದಿರುವ ವರದಿಯನ್ನಾಧರಿಸಿ ನಾವು ಹೇಳಿಕೆ ನೀಡಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ತಮಗೆ ಜವಾಬ್ದಾರಿ ಇದೆ. ಜವಾಬ್ದಾರಿಯಿಂದಲೇ ಈ ಪ್ರಕರಣದ ಬಗ್ಗೆ ಹೇಳಿಕೆ ಕೊಟ್ಟಿದ್ದೇವೆ ಎಂದರು.ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಎಬಿವಿಪಿಯವರಿಗೆ ಬಿಜೆಪಿ ನಾಯಕರಿಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಿಲ್ಲ. ಸತ್ಯವನ್ನು ಮುಚ್ಚಿಡಲು ಆಗಲ್ಲ ಎಂದರು.’ಈ ಪ್ರಕರಣದ ಕುರಿತು ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸುತ್ತಾರೆ. ಬಳಿಕ ಸತ್ಯಾಂಶ ಹೊರಬರಲಿದೆ. ನನ್ನ ಹೇಳಿಕೆಯಿಂದ ಯುವತಿಯ ತಂದೆ-ತಾಯಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ, ಸತ್ಯವನ್ನು ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಕೊಡುಗೆ ಏನು
ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರಮೋದಿ ಅವರು ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಕ್ಕೆ ಪ್ರಧಾನಿ ಮೋದಿ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.ಪ್ರಧಾನಿ ಮೋದಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ನೆನಪಿಡುವಂತಹ ಯಾವ ಯೋಜನೆಗಳನ್ನು ನೀಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಸಂಪೂರ್ಣವಾಗಿ ಸಿಕ್ಕಿಲ್ಲ. ಬರ ಪರಿಹಾರದ ರೂ. ೧೮ ಸಾವಿರ ಕೋಟಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ತಂಡವು ಸಹ ಬರ ಅಧ್ಯಯನ ನಡೆಸಿದ್ದು, ಎನ್‌ಡಿಆರ್‌ಎಫ್ ನಿಧಿಯಿಂದ ಒಂದು ರೂ. ಅನುದಾನ ಬಿಡುಗಡೆಯಾಗಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲಾಗುವುದು. ಇದಕ್ಕೆ ರೂ. ೫೩೦೦ ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು. ಇದಲ್ಲದೇ ಯಾವ ಹೊಸ ಯೋಜನೆಗಳನ್ನು ರಾಜ್ಯಕ್ಕೆ ನೀಡಿಲ್ಲ. ಬಿಜೆಪಿಯ ೨೬ ಸಂಸದರು ಐದು ವರ್ಷ ಏನು ಮಾಡಿದರು. ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ? ಯಾವ ಮುಖ ಹೊತ್ತು ಪದೇ ಪದೇ ರಾಜ್ಯಕ್ಕೆ ಬರುತ್ತಾರೋ ಎಂದು ಟೀಕಿಸಿದರು.