ನೇಹಾ ಹತ್ಯೆ ರಾಜಕೀಯ ಅಸ್ತ್ರವಾಗದಿರಲಿ: ದಿಂಗಾಲೇಶ್ವರಶ್ರೀ

ಹುಬ್ಬಳ್ಳಿ,ಏ20: ನೇಹಾ ಹಿರೇಮಠ ಸಾವು ದೇಶವನ್ನು ದುಃಖಕ್ಕೆ ಈಡು ಮಾಡುವಂತಾಗಿದ್ದು, ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಸೂಕ್ತ ತನಿಖೆಯನ್ನು ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಕೀರ್ ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದರು.

ನಗರದ ಚೆನ್ನಮ್ಮ ವೃತ್ತದಲ್ಲಿಂದು ನೇಹಾ ಹಿರೇಮಠ ಕೊಲೆ ಖಂಡಿಸಿ ತಮ್ಮ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನೇಹಾಳಿಗೆ ನ್ಯಾಯ ಸಿಗಬೇಕಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಸ್ವಾತಂತ್ರ್ಯ ಸಿಗಬೇಕು. ಇದನ್ನು ಬಿಜೆಪಿ ಪಕ್ಷದವರು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವ ನೀಚ ಕೆಲಸ ಮಾಡುತ್ತಿದ್ದಾರೆ. ಮಾನವೀಯತೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದ್ದು, ಈ ಸಾವನ್ನು ಬಹು ಸಂಖ್ಯಾತ ರಾಜಕಾರಣಿಗಳು ಬಳಕೆ ಮಾಡಿಕೊಳ್ಳುತ್ತಾರೆಂದು ನಾಡಿನ ಜನ ಅಂದುಕೊಂಡಿರಲಿಲ್ಲ ಎಂದರು.

ಯಾವುದೇ ಸರ್ಕಾರ ಇರಲಿ ಇಂತಹ ಘಟನೆ ಹಾಗೂ ಕೊಲೆಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬಾರದು. ಏಕಕಾಲಕ್ಕೆ ಬೆಂಗಳೂರು, ತುಮಕೂರು, ಹುಬ್ಬಳ್ಳಿಯಲ್ಲಿ ಕೊಲೆಗಳು ಆಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ಮೂಡಿದೆ ಎಂದವರು ನುಡಿದರು.

ಇನ್ನೂ ಪ್ರಧಾನಿಯವರ ಭೇಟಿ ಬಚಾವೋ..ಬೇಟಿ ಪಡಾವೋ ಎಂಬುದು ಅಕ್ಷರಶಃ ಅನುಷ್ಠಾನಕ್ಕೆ ಬರಬೇಕು. ಸರಕಾರವೇ ಮಹಿಳೆಯರ ರಕ್ಷಣೆಗೆ ಪರವಾನಿಗೆಯ ಆಯುಧ ನೀಡುವಂಥ ವ್ಯವಸ್ಥೆ ಜಾರಿಗೆ ಬರಬೇಕು. ನೇಹಾ ಘಟನೆಯನ್ನು ಎಲ್ಲರೂ ನಿಂತು ನೋಡಿದರೇ ವಿನಹ ಯಾರೂ ರಕ್ಷಣೆಗೆ ಬರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ರಕ್ಷಣೆಗೆ ಆಯುಧ ಇಟ್ಟು ಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಹೊಸಪೇಟೆಯ ಅಮ್ಮನವರು ಮಾತನಾಡಿ, ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಸೆರಗು ಒಡ್ಡಿ ಬೇಡಿಕೊಳ್ಳುತ್ತೇವೆ. ಹೆಣ್ಣಿಗೆ ಬೆಂಬಲ, ರಕ್ಷಣೆ ನೀಡುವ ಕೆಲಸ ಆಗಬೇಕಿದೆ ಎಂದರು.

ಪ್ರತಿಭಟನಾ ಸಮಾವೇಶದಲ್ಲಿ ಶಿಗ್ಗಾವಿ ಸಂಗನಬಸವ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಮಹಾಸ್ವಾಮಿಜಿ, ಬಸವಧರ್ಮ ಪೀಠದ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಸವಣೂರಿನ ದೊಡ್ಡ ಕಲ್ಮಠದ ಶ್ರೀ ಮೊದಲಾದವರು ಪಾಲ್ಗೊಂಡು ಆರೋಪಿಗೆ ಕಾನೂನಿನಡಿ ಕ್ರೂರ ಶಿಕ್ಷೆ ನೀಡಿ, ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.