ನೇಹಾ ಹತ್ಯೆ ಪ್ರಕರಣ:ಸಿಓಡಿ ಹೆಗಲಿಗೆ

ವಿಶೇಷ ಕೋರ್ಟ್ ಸ್ಥಾಪನೆ

ಶಿವಮೊಗ್ಗ, ಏ.೨೨ :ರಾಜ್ಯದಲ್ಲಿ ತೀವ್ರ ಸಂಚಲ ಸೃಷ್ಟಿಸಿತು. ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು, ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ಒಪ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಶಿವಮೊಗ್ಗ ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಿದ್ಯಾರ್ಥಿನಿ ನೇಹಾ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿದೆ ಎಂದರು.
ನೇಹಾ ತಂದೆ ಅವರು ಇನ್ನೂ ನಾಲ್ವರು ಆರೋಪಿಗಳಿದ್ದಾರೆ ಎಂದು ಹೇಳಿದ್ದು, ಆ ದಿಕ್ಕಿನಲ್ಲಿಯೂ ತನಿಖೆ ನಡೆಸಲಾಗುವುದು. ಆರೋಪಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮಿ ಅವರಿಗೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ. ಈ ಮೂಲಕ ಜಾತ್ಯಾತೀತ ಶಕ್ತಿಗಳಿಗೆ ಬೆಂಬಲಿಸುವಂತೆ ಕೋರಿದರು.ದೇಶಕ್ಕೆ ಕಾಂಗ್ರೆಸ್ ಡೇಂಜರ್ ಎಂಬ ಬಿಜೆಪಿಯ ಜಾಹೀರಾತು ಕುರಿತಂತೆ ಪ್ರತಿಕ್ರಿಯೆ ನೀಡಿ, ದೇಶಕ್ಕೆ ಕಾಂಗ್ರೆಸ್ ಡೇಂಜರ್ ಅಲ್ಲ. ಬದಲಿಗೆ ಬಿಜೆಪಿಯೇ ಅಪಾಯಕಾರಿ ಎಂದು ಟೀಕಿಸಿದರು.
ಸಿಐಡಿ ತನಿಖೆ ಪರಂ
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ನೇಹಾ ಹತ್ಯೆ ಪ್ರಕರಣವನ್ನು ಸಿಓಡಿಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳು ಮತ್ತು ನಾನು ಚರ್ಚಿಸಿ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಓಡಿ ಅಧಿಕಾರಿಗಳ ತಂಡೆ ಇಂದೇ ಹುಬ್ಬಳ್ಳಿಗೆ ತೆರಳಿ ಪೊಲೀಸರಿಂದ ನೇಹಾ ಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದರು.ನೇಹಾ ಹತ್ಯೆ ಹಿಂದೆ ಯಾರದೇ ಕೈವಾಡ ಇದ್ದರೂ, ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ೧೦-೧೨ ದಿನಗಳ ಒಳಗಾಗಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಮಯ ನಿಗದಿಗೊಳಿಸಿದ್ದೇವೆ. ಈಗಾಗಲೇ ಈ ಸಂಬಂಧ ಆದೇಶವೂ ಹೊರ ಬಿದ್ದಿದೆ ಎಂದು ಅವರು ತಿಳಿಸಿದರು.ಹತ್ಯೆಯಾಗಿರುವ ನೇಹಾ ತಂದೆ-ತಾಯಿಗೆ ನ್ಯಾಯ ಸಿಗುವ ವಿಶ್ವಾಸ ನನಗಿದೆ. ತನಿಖೆಯ ನಂತರ ಸತ್ಯಾಂಶವೂ ಹೊರಗೆ ಬರಲಿದೆ ಎಂದ ಅವರು, ನನ್ನ ಹೇಳಿಕೆಯಿಂದ ಏನಾದರೂ ನೇಹಾ ತಂದೆ-ತಾಯಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.ಈಗಾಗಲೇ ನೇಹಾ ಹತ್ಯೆಗೈದಿರುವ ಆರೋಪಿಯನ್ನು ಪೊಲೀಸರು ಬಂಧಿಸಿ ಕಾನೂನು ಪ್ರಕಾರ ತನಿಖೆ ಕೈಗೊಂಡಿದ್ದಾರೆ. ಇನ್ನು ಮುಂದೆ ಈ ಪ್ರಕರಣದ ತನಿಖೆ ಸಿಓಡಿ ನಡೆಸಲಿದೆ ಎಂದರು.
ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯಕ್ಕೋಸ್ಕರ ಬಳಸುತ್ತಿದ್ದಾರೆ. ಬಿಜೆಪಿ ನಾಯಕರ ಟ್ವಿಟ್ಟರ್, ಹೇಳಿಕೆಗಳನ್ನು ಗಮನಿಸಿದರೆ ಇದಕ್ಕೆ ರಾಜಕೀಯ ಬಣ್ಣ ಕಟ್ಟುತ್ತಿರುವುದು ಸ್ಪಷ್ಟವಾಗುತ್ತಿದೆ. ಬಿಜೆಪಿ ನಾಯಕರು ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಕೆಲಸ ಮಾಡಬಾರದರು ಎಂದು ಅವರು ಹೇಳಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಫಯಾಜ್‌ನಿಂದ ಭೀಕರ ಹತ್ಯೆಗೊಳಗಾದ ನೇಹಾ ಹಿರೇಮಠ್ ಹತ್ಯೆಯನ್ನು ಖಂಡಿಸಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು ಇಂದು ನಗರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ನಾಳೆ ತುಮಕೂರಿಗೆ ಸಿಎಂ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ ಸಂಜೆ ತುಮಕೂರಿಗೆ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಚಿತ್ರದುರ್ಗದಲ್ಲಿ ನಾಳೆ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿರವರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸಂಜೆ ೫ ಗಂಟೆಗೆ ನಗರದ ಯಲ್ಲಾಪುರದಲ್ಲಿ ನಡೆಯಲಿರುವ ಸಭೆಯಲ್ಲಿ ಈ ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಯಲ್ಲಾಪುರದಲ್ಲಿ ಮಧುಗಿರಿ, ಕೊರಟಗೆರೆ, ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಯಲಿದ್ದು, ಈ ಸಭೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದರು.
ಈ ಸಭೆಯಲ್ಲಿ ೪ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ೪೦ ರಿಂದ ೫೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.