ನೇಹಾ ಹತ್ಯೆ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.23:- ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಚೌಕದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಕಾರರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಹದಗೆಡಿಸಿದೆ, ಲವ್ ಜಿಹಾದ್ ಗೆ ಕಡಿವಾಣ ಹಾಕದ ಸರ್ಕಾರ ಇದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ನೇಹಾ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಕಳೆದ ಮೂರು ದಿನದಿಂದ ರಾಜ್ಯದಲ್ಲಿ 8 ಹತ್ಯೆಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗಿನಿಂದಲೂ ರಾಜ್ಯಕ್ಕೆ ದರಿದ್ರ ಅಂಟಿಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತುಷ್ಟೀಕರಣ ರಾಜಕಾರಣವನ್ನು ಮೊದಲಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಕೆ.ಜಿ. ಹಳ್ಳಿ-ಡಿಜಿ ಹಳ್ಳಿಯಲ್ಲಿ ತನ್ನದೇ ಶಾಸಕರ ಮೇಲೆ ದಾಳಿ ನಡೆದರೂ ಸರ್ಕಾರ ಕ್ರಮವಹಿಸಲಿಲ್ಲ.ಮತ ಪಡೆಯುವುದಕ್ಕಾಗಿ ಅಲ್ಪಸಂಖ್ಯಾತರ ಓಲೈಸಿ, ದಲಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಅವರು ಹೇಳಿದರು.
ನೇಹಾ ಪೆÇೀಷಕರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ. ವೈಯಕ್ತಿಕ ಕಾರಣಕ್ಕೆ ಪ್ರಕರಣ ನಡೆದಿದೆಯೆಂದು ಹಗುರವಾಗಿ ಮಾತನಾಡಿದರು. ಆಗ, ರಾಜ್ಯದಲ್ಲಿ ಇಂಥ ಹತ್ಯೆಗಳು ಮರುಕಳಿಸದಂತೆ ಕ್ರಮವಹಿಸಲು ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡಿಸಿರುವ ಮುಖ್ಯಮಂತ್ರಿ ಅವರೇ ಹೊಣೆ ಹೊರಬೇಕು. ನಾಡಿನ ತಾಯಂದಿರ ಮೇಲೆ ಗೌರವ ಇದ್ದರೆ, ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ರಾಜ್ಯ ಸರ್ಕಾರ ಬೆಂಬಲವಾಗಿದೆ. ಕೊಡಗಿನಲ್ಲಿಯೂ ಪಕ್ಷದ ಕಾರ್ಯಕರ್ತನ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದೊಡನೆಯೇ ರಾಜ್ಯಕ್ಕೆ ಶನಿಕಾಟ ಶುರುವಾಗಿದೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಪ್ರಧಾನಿ ನಾಲಾಯಕ್ ಅನ್ನುವ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನರು ಪಾಠ ಕಲಿಸಲಿದ್ದಾರೆ. ಕೊಲೆಗಡುಕರಿಗೆ ರಕ್ಷಣೆ ನೀಡುತ್ತಿರುವ ಹೊಣೆಗೇಡಿ, ನಾಲಾಯಕ್ ಮುಖ್ಯಮಂತ್ರಿ, ಗೃಹ ಸಚಿವರನ್ನು ಮನೆಗೆ ಕಳುಹಿಸುವುದಾಗಿ ಅವರು ಹೇಳಿದರು.
ಚುನಾವಣೆಗಳು ಬರುತ್ತವೆ ಹೋಗುತ್ತವೆ. ಹೆಣ್ಣು ಮಕ್ಕಳ ಗೌರವ ಉಳಿಸಲು ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದಾನೆ. ನಾವು ರಾಜಕೀಯ ಮಾಡುತ್ತಿಲ್ಲ. ಮಹಿಳೆಯರ ಗೌರವಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಘು ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ನಗರ ಘಟಕ ಅಧ್ಯಕ್ಷ ಎಲ್. ನಾಗೇಂದ್ರ , ಮಾಜಿ ಮೇಯರ್ ಶಿವಕುಮಾರ್, ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಶಾಸಕ ಎಸ್.ಎ. ರಾಮದಾಸ್, ಮೈ.ವಿ. ರವಿಶಂಕರ, ಎಂ.ಜಿ. ರೂಪಾ, ಎಂ. ಸತೀಶ್, ಬಿ.ವಿ. ಮಂಜುನಾಥ್, ಎಸ್. ಸಂದೇಶ್ ಸ್ವಾಮಿ, ಕೌಲನಹಳ್ಳಿ ಸೋಮಶೇಖರ್, ಅಶ್ವಿನಿ ಶರತ್, ಪ್ರಮೀಳಾ ಭರತ್, ಮಿರ್ಲೆ ಶ್ರೀನಿವಾಸಗೌಡ, ನಾಗರಾಜ ಮಲ್ಲಾಡಿ, ವಾಣೀಶ್ ಕುಮಾರ್, ಮಂಗಳಾ ಸೋಮಶೇಖರ್, ಎಸ್. ಲಕ್ಷ್ಮೀದೇವಿ, ರೇಣುಕಾ ರಾಜ್, ಜ್ಯೋತಿ ರೇಚಣ್ಣ, ಪ್ರಫುಲ್ಲಾ ಮಲ್ಲಾಡಿ, ಕೆ.ಟಿ. ಚಲವೇಗೌಡ, ಬ್ರಹ್ಮಾಚಾರ್, ಸಾತ್ವಿಕ್, ಕೆ.ಸಿ. ಲೋಕೇಶ್ ನಾಯಕ, ಚಿಕ್ಕ ವೆಂಕಟ ಸೇರಿದಂತೆ ಅನೇಕರು ಇದ್ದರು.