ನೇಹಾ ಹತ್ಯೆ ಖಂಡಿಸಿ ನಾಡಿದ್ದು ಗಂಗಾವತಿ ಬಂದ್


ಸಂಜೆವಾಣಿ ವಾರ್ತೆ
ಗಂಗಾವತಿ, ಏ.22: ನಾಗರೀಕರ ಸಮಾಜ ತಲೆ ತಗ್ಗಿಸುವಂಥ ಕೃತ್ಯ ಎಸಗಿರುವ ನೇಹಾ ಹಿರೇಮಠ ಹತ್ಯೆಯ ಫಯಾಜ್‍ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಜಾತ್ಯಾತೀತ ಹಾಗು ಪಕ್ಷಾತೀತವಾಗಿ ಸರ್ವ ಸಮಾಜದಿಂದ ಏಪ್ರೀಲ್ 24 ಬುಧವಾರ ಗಂಗಾವತಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಹಿಂದು ಪರ ಸಂಘಟನೆಯ ಮುಖಂಡ ಸಂತೋಷ್ ಕೇಲೋಜಿ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ನಗರದ ಎಪಿಎಂಸಿಯಲ್ಲಿ ಅಂದು ಬೆಳಗ್ಗೆ 8 ಗಂಟೆಗೆ  ಗಂಗಾವತಿ ತಾಲೂಕಿನ ಸರ್ವ ನಾಗರೀಕರು ಜಮಾವಣೆಗೊಂಡು ಬಳಿಕ ಮೆರವಣೆಗೆ ಮೂಲಕ ಗಾಂಧಿ ವೃತ್ತ ತಲುಪಲಿದ್ದು ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ಜರುಗಲಿದೆ, ಅಪರಾಧ ಪ್ರಕರಣಗಳನ್ನು ಎಸಗುವವರಿಗೆ ಭಯ ಹುಟ್ಟಿಸುವ ಕಾನೂನಿನ ಅಗತ್ಯವಿದೆ, ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಕೊಲೆ, ಗುಂಡಾಗಿರಿ, ಪ್ರಚೋದನಾತ್ಮಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರಕಾರದ ಗಮನಸೆಳೆಯಲು ಬಂದ್ ಮಾಡಲಾಗುತ್ತಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಮಾತನಾಡಿ, ಸಿಎಂ, ಡಿಸಿಎಂ ಹಾಗು ಗೃಹ ಮಂತ್ರಿ ಘಟನೆಯ ಕುರಿತು ಗಂಭೀರವಾಗಿ ಪರಿಗಣಿಸಿಲ್ಲ ಅವರ ಲಘು ಹೇಳಿಕೆ ಸಾಕಷ್ಟು ನೋವುಂಟು ಮಾಡಿದೆ. ನೇಹಾ ಹಿರೇಮಠ ಸುಶಿಕ್ಷಿತ ಕುಟುಂಬದಿಂದ ಬಂದಿದ್ದು, ಆಕೆಯನ್ನು ಮಧುವೆಯಾಗಲು ನಿರಂತರ ಕಿರಿಕಿರಿ ಫಯಾಜ್ ಮಾಡುತ್ತಿದ್ದ ಆಕೆ ನಿರಾಕರಣ ಮಾಡಿದಕ್ಕಾಗಿ ಕೊಲೆ ಮಾಡಿದ್ದಾನೆ ಇದರ ಹಿಂದೆ ಹಲವು ಜನರಿದ್ದು ಅವರೆಲ್ಲರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು, ರಾಜಕಾರಣದ ಹಸ್ತಕ್ಷೇಪ ತನಿಖೆಯಲ್ಲಾಗಬಾರದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸರಕಾರ ಮೃದು ಧೋರಣೆ ತಾಳಬಾರದು, ಅಧಿಕಾರಿಗಳು ಹಾಗು ನ್ಯಾಯಾಂಗ್ ವ್ಯವಸ್ಥೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದ್ದು ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು, ನೇರಾ ಸಾಕ್ಷ್ಯ ಇರುವ ಇಂಥ ಪ್ರಕರಣಗಳಿಗೆ ನೇರ ಶಿಕ್ಷೆಯ ಕಾನೂನು ತರಬೇಕೆಂದು ಒತ್ತಾಯಿಸಿದರು.
ಗಂಗಾವತಿ ಶಿಕ್ಷಣ ಕ್ಷೇತ್ರದ ಹಬ್ ಆಗುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿನ ವಿದ್ಯಾಬ್ಯಾಸಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಬಂದ್ ಮಾಡಲಾಗುತ್ತಿದೆ. ಗಾಂಜಾ, ಇಸ್ಪೀಟ್, ಮಟಕಾ ಹಾವಳಿ ಹೆಚ್ಚಾಗಿದ್ದು, ಇವುಗಳಿಂದಲೇ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಗಂಗಾವತಿಯಲ್ಲಿ ಇತ್ತೀಚಿಗೆ ಸಾಕಷ್ಟು ಪ್ರಕರಣಗಳು ಇದರಿಂದಲೇ ನಡೆದಿದ್ದು ಪೊಲೀಸ್ ಇಲಾಖೆ ಇನ್ನೋರ್ವ ಯುವ ಮುಖಂಡ ನೀಲಕಂಠಪ್ಪ ನಾಗಶೆಟ್ಟಿ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ವೆಂಕಟೇಶ್ ಅಮರಜ್ಯೋತಿ, ನಾಗರಾಜ್ ಗುತ್ತೇದಾರ್ ವಕೀಲರು, ಮಾದಿಗ ದಂಡೋರಾ ರಾಜ್ಯಾಧ್ಯಕ್ಷ ಹುಸನೇನಪ್ಪ ಮಾದಿಗ ಮಾತನಾಡಿದರು. ಗೋಷ್ಟಿಯಲ್ಲಿ  ಯುವ ಮುಖಂಡರಾದ ಸಂಗಮೇಶ್ ಅಯೋಧ್ಯಾ, ಅಯ್ಯನಗೌಡ ಹೇರೂರ್, ಮಹಾಂತೇಶ್, ಶರಣಯ್ಯ, ಶರಬಯ್ಯ ಇತರರಿದ್ದರು.