ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ

ಬೀದರ್: ಏ.22:ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದ್ದಾರೆ.
ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಕೊಲೆ ನಡೆದಿರುವುದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಸಮಾಜದ ಯುವತಿಯನ್ನು ಗುರಿಯಾಗಿಸಿಕೊಂಡು ಕೆಲವರು ಲವ್ ಜಿಹಾದ್ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಪ್ರಕರಣದ ಆರೋಪಿ ಫಯಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದ್ದಾರೆ.
ಇದೊಂದು ಪ್ರೇಮ ಪ್ರಕರಣ ಎಂದು ಗೃಹ ಸಚಿವರು ಹೇಳಿರುವುದು ಸರಿಯಲ್ಲ. ಓಟ್‍ಬ್ಯಾಂಕ್ ರಾಜಕಾರಣ ಮಾಡಬಾರದು. ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಕೊಲೆಗಾರನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಪ್ರೀತಿಯ ನಾಟಕವಾಡಿ ಲವ್ ಜಿಹಾದ್ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.