ನೇರ ಸಂದರ್ಶನ ಮೂಲಕ ಹತ್ತು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ

ಕಲಬುರಗಿ.ನ.9:ಕಲಬುರಗಿ ಜಿಲ್ಲೆಯ ಆರೋಗ್ಯ ವಿಸ್ತರಣಾ ಕೇಂದ್ರಗಳಲ್ಲಿ ಖಾಲಿಯಿರುವ 10 ವೈದ್ಯಾಧಿಕಾರಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ರೋಸ್ಟರ್-ಕಮ್-ಮೇರಿಟ್ ಮೂಲಕ ಒಂದು ವರ್ಷದ ಅವಧಿಗೆ ನೇರ ಸಂದರ್ಶನದ (ವಾಕ್-ಇನ್-ಇಂಟರವ್ಯೂವ್) ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಪ್ರತಿ ಶುಕ್ರವಾರ ನಡೆಯುವ ನೇರ ಸಂದರ್ಶನ (ವಾಕ್-ಇನ್-ಇಂಟರವ್ಯೂವ್)ಕ್ಕೆ ಇಚ್ಚೆಯುಳ್ಳ ಅರ್ಹ ಎಂ.ಬಿ.ಬಿ.ಎಸ್. ಪಾಸಾದ ಅಭ್ಯರ್ಥಿಗಳು ಮೂಲ ದಾಖಲಾತಿ, ಝೆರಾಕ್ಸ್ ಪ್ರತಿಗಳ ಶೈಕ್ಷಣಿಕ ದಾಖಲಾತಿ ಹಾಗೂ ಬಯೋಡಾಟಾದೊಂದಿಗೆ ಹಾಜರಾಗಬೇಕು. ಪ್ರತಿ ತಿಂಗಳು 45,000 ರೂ.ಗಳ ವೇತನ ನೀಡಲಾಗುತ್ತದೆ. ಮೀಸಲಾತಿ ಅಡಿ ನೇಮಕಾತಿ ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
ಈ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹಾಗೂ “ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಯಲ್ಲಿ ಖಾಯಂಗೊಳಿಸಲಾಗುವುದಿಲ್ಲ” ಎಂಬ ಷರತ್ತಿಗೊಳಪಟ್ಟು ಖಾಲಿಯಿರುವ ಈ ಹುದ್ದೆಗಳನ್ನು ಭರ್ತಿಯಾಗುವವರೆಗೂ ನೇರ ಸಂದರ್ಶನ ಮೂಲಕ 2021ರ ಮಾರ್ಚ್ ಅಂತ್ಯದವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278618ಗೆ ಸಂಪರ್ಕಿಸಲು ಕೋರಲಾಗಿದೆ.