ನೇರ ಫೋನ್ ಇನ್ ಕಾರ್ಯಕ್ರಮ:ಕೇಳುಗರ ಪ್ರಶ್ನೆಗೆ ಕಿವಿಯಾದ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ

ಕಲಬುರಗಿ:ಮೇ.29: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆಯ ಮತದಾನ ಬರುವ ಮೇ 3 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಕಲಬುರಗಿ ಆಕಾಶವಾಣಿ ಆಯೋಜಿಸಿದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಕೇಳುಗರ ಪ್ರಶ್ನೆಗೆ ಕಿವಿಯಾಗಿ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿರುವ ಕಾರಣ ಮತದಾನ ಪ್ರಕ್ರಿಯೆ, ಪ್ರಾಶಸ್ತ್ಯದ ಮತ ನೀಡಿಕೆ, ಮತ ಮೌಲ್ಯ, ಅಪಮೌಲ್ಯ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಬಗೆ-ಬಗೆಯ ಶೋತೃಗಣ ಪ್ರಶ್ನೆಗೆ ಕೃಷ್ಣ ಬಾಜಪೇಯಿ ಮತ್ತು ನ್ಯಾಷನಲ್ ಲೇವಲ್ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಉತ್ತರಿಸಿದರು.

ಕಲಬುರಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಸೋಮಶೇಖರ ರೂಳಿ ಕಾರ್ಯಕ್ರಮ ನಡೆಸಿಕೊಟ್ಟರು.

ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಮತದಾರರಿಗೆ ಜಾಗೃತಿ ಉಂಟು ಮಾಡುವ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು. ನನ್ನನ್ನು ಸೇರಿ ಹಲವಾರು ಕೇಳುಗರಿಂದ ಮೂಡಿಬಂದಂತಹ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿದೆ. ಬ್ಯಾಲೆಟ್ ಪೇಪರ್ ಮತದಾನದಲ್ಲಿ ಮತ ಅಪಮೌಲ್ಯ ಹೆಚ್ಚಾಗುವುದರಿಂದ ಇದನ್ನು ತಡೆಗಟ್ಟಲು ಮತದಾರರಿಗೆ ಜಾಗೃತಿ ತುಂಬಾನೆ ಮುಖ್ಯವಾಗಿದೆ. ಇತರೆ ಚುನಾವಣಾ ಸಿದ್ಧತೆಯಂತೆ ಅಂಗನವಾಡಿ ಕಾರ್ಯಕರ್ತೆ, ಶಿಕ್ಷಕರಿಂದ ಪದವೀಧರರ ಮತದಾರ ಪಟ್ಟಿ ಸಿಧ್ಧಪಡಿಸುವ ಕಾರ್ಯವಾಗಬೇಕು.
-ವಾಸುದೇವ ಪಾಟೀಲ,ಶ್ರೋತೃ,ಪುಣೆ .