ನೇರಪಾವತಿಗಾಗಿ  ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ.ಮಾ.೧೦: ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ದಿನಗೂಲಿ ನೌಕರರನ್ನು ನೇರ ಪಾವತಿ ಮಾಡಬೇಕು ಹಾಗೂ ನೌಕರರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ  ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಪದಾಧಿಕಾರಿಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಡಿ. ಹನುಮಂತಪ್ಪ ಮಾತನಾಡಿಸುಮಾರು ೨೦ ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ವೇಳೆ  ಬಿಸಿಎಂ ಹಾಸ್ಟೆಲ್ ನಿಂದ ನೀಡಿದ ಅನ್ನವನ್ನು ಸೇವಿಸಿ, ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದೇವೆ. ಆದರೂ ನಮ್ಮ ಬೇಡಿಕೆಗಳನ್ನು ಮೂಲೆಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೋವಿಡ್ ವೇಳೆ ಕಿಟ್ ಧರಿಸಿ ಕಾರ್ಯ ನಿರ್ವಹಿಸಿದ್ದ ನಮಗೆ ರಿಸ್ಕ್ ಅಲೋಯೆನ್ಸ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೆ ಈಡೇರಿಸಿಲ್ಲ.ನೌಕರರನ್ನು ನೇರ ಪಾವತಿದಾರರಾಗಿ ಮಾಡಬೇಕು ಹಾಗೂ ಕಾಯಂಗೊಳಿಸಬೇಕು. ಮತ್ತು ಕೋವಿಡ್-೧೯ ಕಾರ್ಯನಿರ್ವಹಿಸಿದ್ದು, ಅದರ ರಿಸ್ಕ್ ಅಲೋಯೆನ್ಸ್ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.ಈ ಕುರಿತು ಜಿಲ್ಲಾಡಳಿತವಾಗಲೀ, ಸರ್ಕಾರದ ಪರವಾಗಿ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಆಶ್ವಾಸನೆ ನೀಡುವವರೆಗೆ ನಾವುಗಳು ಅಹೋರಾತ್ರಿ ಧರಣಿ ಹಿಂಪಡೆಯುವುದಿಲ್ಲ. ಈ ವೇಳೆ ಆಗುವ ಯಾವುದೇ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ, ಸರ್ಕಾರವೇ ಹೊಣೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು.ಧರಣಿಯಲ್ಲಿ ಜಿ.ಎಸ್. ಮಹಾಂತೇಶ್, ಕೆ. ಬಸವರಾಜ್, ಹೆಚ್.ಡಿ. ಸುರೇಂದ್ರ, ಹೆಚ್. ಕರಿಬಸಪ್ಪ, ಹೆಚ್. ತಿಪ್ಪೇಸ್ವಾಮಿ ಹಾಗೂ ವಿನೋದ ಬಾಯಿ ಸೇರಿದಂತೆ ಸುಮಾರು ೨೦೦ ಕ್ಕೂ ಹೆಚ್ಚು ನೌಕರರು  ಉಪಸ್ಥಿತರಿದ್ದರು.