
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,14- ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಇಲ್ಲ ಎಂಬ ಮಾಹಿತಿ ದೊರೆತ ತಕ್ಷಣ, ಜೆಡಿಎಸ್ ವರಿಷ್ಟ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿ ನೇಮಿರಾಜ ನಾಯ್ಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಷ್ಟೇ ಅಲ್ಲದೆ, ಜಯದ ಹಾದಿಗೆ ತಂದು ನಿಲ್ಲಿಸಿದ ಮುಖಂಡನೆಂದರೆ ಕೊಟ್ಟೂರಿನ ಎಂ.ಎಂ.ಜೆ.ಹರ್ಷವರ್ಧನ ಎಂದರೆ ತಪ್ಪಾಗಲಾರದು.
ನೇಮರಾಜ ಅವರಿಗೆ ಕಳೆದ ಎರೆಡು ಚುನಾವಣೆಯ ನೋವನ್ನು ಮರೆಸಿ ಈ ಚುನಾವಣೆಯಲ್ಲಿ ಜನ ಬೆಂಬಲದೊಂದಿಗೆ ಹರ್ಷ ತಂದಿದ್ದು ಈ ಹರ್ಷ ಅವರೇ ಎನ್ನಬಹುದು.
ಈ ಹಿಂದೆ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಭೀಮಾನಾಯ್ಕ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು ಅದು ನೇಮಿರಾಜನಾಯ್ಕ ವಿರುದ್ದ.
ಕಾಕಾತಾಳೀಯ ಎಂಬಂತೆ
ಈಗ ಅದೇ ಭೀಮಾನಾಯ್ಕ ವಿರುದ್ದ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ನೇಮಿರಾಜನಾಯ್ಕ ಗೆದ್ದಿದ್ದಾರೆ. ಭೀಮಾನಾಯ್ಕ ನ ಗೆಲುವು ನೂರಲ್ಲಿತ್ತು. ನೇಮಿರಾಜ ನಾಯ್ಕ ಅವರ ಗೆಲುವು ಸಾವಿರದ ಅಂತರದಲ್ಲಿದೆ.
ಕಳೆದ ಎರೆಡು ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕಾರ ಮಾಡಿದ ಹರ್ಷವರ್ಧನ ಅವರನ್ನು ಶಾಸಕ ಭೀಮಾನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡುವುದಾಗಿ ಹೇಳಿ ಮೋಸ ಮಾಡಿ, ಸಿರಾಜ್ ಅವರನ್ನು ಮಾಡಿದ್ದಕ್ಕೆ ಬೇಸರಗೊಂಡ ಹರ್ಷವರ್ಧನ್ ಕಾಂಗ್ರೆಸ್ ತೊರೆದರು. ಅದೇ ಕ್ಷಣದಲ್ಲಿ ನೇಮಿರಾಜ ಜೊತೆ ಸೇರಿ ಜೆಡಿಎಸ್ ಬಾವುಟ ಹಿಡಿದು. ಕೊಟ್ಟೂರು ಜನರ ಬೆಂಬಲದೊಂದಿಗೆ ತಮ್ಮ ಹಟ ಸಾಧಿಸಿ ನೇಮಿರಾಜ ನಾಯ್ಕ ಅವರನ್ನು ಶಾಸಕರನ್ನಾಗಿ ಮಾಡುವಲ್ಲಿ ಹರ್ಷವರ್ಧನ್ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಈ ಬಗ್ಗೆ ಸಂಜೆವಾಣಿ ಜೊತೆ ಮಾತನಾಡಿದ ಹರ್ಷವರ್ಧನ್ ಅವರು ಇದಕ್ಕೆಲ್ಲ ಜನರ ಸಹಕಾರ ಮುಖ್ಯ. ಜೊತೆಗೆ ನಾವು ಅವರ ಸಂಕಷ್ಟದ ಕಾಲದಲ್ಲಿ ಸ್ಪಂದಿಸಿದರೆ. ಅವರು ನಮ್ಮನ್ನು ಕೈ ಬಿಡಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದರು.