ನೇಮಕಾತಿ ವಿಳಂಬ ವಿರೋಧಿಸಿ ಪ್ರತಿಭಟನೆ

ಕೋಲಾರ, ಜು.೨೭:ರಾಜ್ಯ ಲೋಕಸೇವಾ ಆಯೋಗವು ನೇಮಕಾತಿಯಲ್ಲಿ ತೋರುತ್ತಿರುವ ವಿಳಂಬ ದೋರಣೆಯನ್ನು ಖಂಡಿಸಿ ಹಾಗೂ ನೂತನ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಬೇಕೆಂದು ಆಗ್ರಹಿಸಿ, ಬೆಂಗಳೂರಿನ ಉದ್ಯೋಗ ಸೌದದ ಗೇಟ್ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಕೋಲಾರ ಜಿಲ್ಲೆಯ ಅಭ್ಯರ್ಥಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೋರೋನಾ ಮುಗಿದ ನಂತರ ಯಾವುದೇ ನೂತನ ಅಧಿಸೂಚನೆಗಳನ್ನು ಕೆ.ಪಿ.ಎಸ್.ಸಿ. ಹೊರಡಿಸಿಲ್ಲ, ಈಗಲಾಗಲೇ ಕೆ.ಎ.ಎಸ್, ಪಿ.ಡ್ಲ್ಯೂ.ಡಿ, ಎಸ್.ಡಿ.ಎ, ಗ್ರೂಪ್ ಸಿ ಪರೀಕ್ಷೆಗಳು ಮುಗಿದಿದ್ದರೂ ಸಹ ಫಲಿತಾಂಶವನ್ನು ಹೊರಡಿಸಿಲ್ಲ, ಇದರಿಂದ ಅಭ್ಯರ್ಥಿಗಳ ವಯೋಮಾನವೂ ಸಹ ಮುಗಿಯುತ್ತಿದೆ. ಹಾಗಾಗಿ ಕೆ.ಪಿ.ಎಸ್.ಸಿ. ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡದೆ ಕೂಡಲೇ ಫಲಿತಾಂಶಗಳನ್ನು ಪ್ರಕಟಿಸಿ ನೇಮಕಾತಿ ಪತ್ರಗಳನ್ನು ನೀಡಬೇಕು. ಇದರೊಂದಿಗೆ ನೂತನ ನೇಮಕಾತಿಗಳಿಗೆ ಅಧಿಸೂಚನೆಯನ್ನು ಹೊರಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವೇಕ್ ಇನ್ಫೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್, ಎನ್.ಕೆ.ನಾಗೇಶ್, ಜಿ.ಕೆ.ಚಂದ್ರಪ್ಪ, ಜಿ. ಅಂಬರೀಶ್, ಮೋಹನ್, ಎಸ್.ಆರ್.ರಾಕೇಶ್, ಸಿ.ಕೆ.ರಂಜಿತ್, ಮುರಳಿ ಮೋಹನ್, ವೆಂಕಟೇಶ್, ಗಂಗರಾಜು, ಆನಂದ್, ನಾಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.