ನೇಪಾಳದ ಬೀರ್‍ಗಂಜ್‍ನಲ್ಲಿ ಜರುಗಿದ ಬಸವ ಅಂತರಾಷ್ಟ್ರೀಯ ಸಮ್ಮೇಳನಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ “ದಾಸೋಹ ರತ್ನ” ಪ್ರಶಸ್ತಿ ಪ್ರದಾನ

ಕಲಬುರಗಿ:ಜು.12: ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯನೀಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಅವರಿಗೆ ಅಂತರಾಷ್ಟ್ರೀಯ ಮಟ್ಟದ “ದಾಸೋಹ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನೇಪಾಳದ ಬೀರ್‍ಗಂಜನಲ್ಲಿ ಜುಲೈ 9 ಮತ್ತು 10 ರಂದು ಜರುಗಿದ ಬಸವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಅವರ ಪರವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಅಂತರಾಷ್ಟ್ರೀಯ ಮಟ್ಟದ “ದಾಸೋಹ ರತ್ನ” ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀ ಬಸವರಾಜ ದೇಶಮುಖ ನೇಪಾಳದಲ್ಲಿ ಬಸವ ಅಂತರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದ್ದು ಬಹಳ ಖುಷಿ ನೀಡಿದ್ದು, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಅವರಿಗೆ ಈ “ದಾಸೋಹ ರತ್ನ” ಪ್ರಶಸ್ತಿ ನೀಡಿ ಗೌರವಿಸಿದ್ದು ಸಮಾಜದ ಪರವಾಗಿ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಈ ಸಮ್ಮೇಳನದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ ಮಾತನಾಡಿ ವಿಶ್ವವ್ಯಾಪಿ ಸಂದೇಶ ಸಾರಿದ ಕಾಯಕಯೋಗಿ, ವಿಶ್ವಗುರು ಬಸವೇಶ್ವರರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದಂತೆ ಕಲಬುರಗಿಯ ಶ್ರೀ ಶರಣಬಸವೇಶ್ವರರು ಕೃಷಿ ಮತ್ತು ದಾಸೋಹಕ್ಕೆ ಮಹತ್ವ ನೀಡಿ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿದ್ದರು. ಅದೇ ರೀತಿ ಶ್ರೀ ಶರಣಬಸವೇಶ್ವರ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರು ಅನ್ನದಾಸೋಹ ಹಾಗೂ ಜ್ಞಾನದಾಸೋಹದ ಮೂಲಕ ದಾಸೋಹ ಪರಂಪರೆ ಮುಂದುವರೆಸಿ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಸತ್ಯಾದೇವಿ ಮಾತಾಜಿ ವಹಿಸಿದ್ದರು.

ಈ ಸಮಾರಂಭದಲ್ಲಿ ಅಲ್ಲಮಪ್ರಭು ಸ್ವಾಮೀಜಿ, ಶ್ರೀಮತಿ ನಂದಿನಿ ನಿಷ್ಠಿ, ಡಾ. ಪ್ರಕಾಶ ಪಾಟೀಲ, ಡಾ. ನಾನಾಸಾಹೇಬ ಹಚ್ಚಡದ, ಶ್ರೀಶೈಲ್ ಮದಾನಿ, ಶಾಂತಿವೀರ ಕೋಕಟನೂರ, ಸುರೇಶ ಯಲ್ಲಡಗಿ ಸೇರಿದಂತೆ ನೇಪಾಳದ ಬಸವ ಸಂಘಟನೆ ಆಯೋಜಕರು ಉಪಸ್ಥಿತರಿದ್ದರು