ನೇಪಾಳದಲ್ಲಿ ಪ್ರಬಲ ಭೂಕಂಪನ ಆರು ಮಂದಿ ಸಾವು


ಕಠ್ಮಂಡು/ನವದೆಹಲಿ,ನ.೯- ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ ೬ ಮಂದಿ ಸಾವನ್ನಪ್ಪಿದ್ದಾರೆ. ಇಂದು ನಸುಕಿನಲ್ಲಿ ನೇಪಾಳದ ದೋಟಿ ಜಿಲ್ಲೆಯಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆ ಜನರು ಭಯಭೀತರಾಗಿ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಪ್ರಾಥಮಿಕ ವರದಿಯ ಅನುಸಾರ ಇದುವರೆಗೆ ೬ ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ.
ನೇಪಾಳದಲ್ಲಿ ರಾತ್ರಿ ೮.೫೨ರ ಸುಮಾರಿಗೆ ಮೊದಲ ಬಾರಿ ಭೂಮಿ ಕಂಪಸಿದ ಅನುಭವವಾಗಿದೆ. ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೪.೯೮ರಷ್ಟು ದಾಖಲಾಗಿತ್ತು. ಇಂದು ಬೆಳಿಗ್ಗೆ ೨ನೇ ಬಾರಿ ಪ್ರಬಲವಾಗಿ ಭೂಮಿ ಕಂಪಿಸಿದೆ. ರಿಕ್ಟರ್ಮಾಪಕದಲ್ಲಿ ೬.೩ ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ.
ಭೂಕಂಪವು ಭೂಮಿಯ ೧೦ ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿದೆ. ರಾತ್ರಿಯಿಂದೀಚೆಗೆ ಯಾವುದೇ ತುರ್ತು ಕರೆಗಳು ಬಂದಿಲ್ಲ. ನೇಪಾಳದಲ್ಲೇ ಭೂಕಂಪನದ ಕೇಂದ್ರವಿತ್ತು ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಜ್ಞರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲೂ ಜನರು ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಸಂಭವಿಸಿದ ಕೇವಲ ಅರ್ಧ ತಾಸಿನಲ್ಲಿ ಟ್ವಿಟರ್‌ನಲ್ಲಿ ಆಶ್ ಟ್ಯಾಗ್ ಮಾಡಿ ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭೂಮಿ ಕಂಪಿಸಿದ್ದರಿಂದ ಬೆಚ್ಚಿ ಬಿದ್ದ ಜನರು ಮನೆ ಕಟ್ಟಡಗಳಿಂದ ಹೊರಗೋಡಿ ಬಂದು ರಸ್ತೆಯಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಭೂಕಂಪನದಿಂದಾಗಿ ಆಸ್ತಿ-ಪಾಸ್ತಿ ಮತ್ತು ನಿರ್ದಿಷ್ಟ ಸಂಖ್ಯೆಯ ಸಾವು-ನೋವುಗಳು ಇದುವರೆಗೆ ನಿಖರವಾಗಿ ತಿಳಿದುಬಂದಿಲ್ಲ.
ಭೂಕಂಪ ಸಂಭವಿಸಿದ ದೋಟಿ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿವೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
ದೆಹಲಿಯಲ್ಲೂ ನಡುಗಿದ ಭೂಮಿ
ರಾಜಧಾನಿ ದೆಹಲಿ, ಘಾಜಿಯಾಬಾದ್ ಮತ್ತು ಗುರುಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಲಖನೌದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಗಾಢ ನಿದ್ರೆಯಲ್ಲಿದ್ದ ಜನರು ಭೂಮಿ ನಡುಗುತ್ತಿದ್ದಂತೆ ನಿದ್ದೆಯಿಂದ ಹೊರಗೋಡಿ ಬಂದಿದ್ದಾರೆ. ಭೂಮಿ ಕಂಪಿಸಿದಾಗ ನಾನು ಕಚೇರಿಯಲ್ಲಿದೆ. ಭೂಮಿ ನಡುಗುವುದು ನಿಂತ ತಕ್ಷಣ ಇದು ಪ್ರಬಲ ಭೂಕಂಪನ ಎಂಬುದು ಅರಿವಿಗೆ ಬಂತು. ನಂತರ ಕಟ್ಟಡ ತೊರೆದು ಹೊರಗೋಡಿ ಬಂದೆವು ಎಂದು ಜನರು ಮಾಹಿತಿ ನೀಡಿದರು.
ಉತ್ತರಾಖಂಡದ ಹಿಮಾಲಯ ಪ್ರದೇಶಗಳು ಮತ್ತು ನೇಪಾಳದ ಪಕ್ಕದಲ್ಲಿ ಕಳೆದೆರೆಡು ದಿನಗಳಿಂದ ಕಡಿಮೆ ಪ್ರಮಾಣದಲ್ಲಿ ಭೂಮಿ ಕಂಪಿಸುತ್ತಲೇ ಇವೆ. ಅ. ೧೯ ರಂದು ಕಠ್ಮಂಡುವಿನಲ್ಲ ೫.೧ ರಷ್ಟು ತೀವ್ರತೆ ಭೂಮಿ ಕಂಪಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.