ಕಲಬುರಗಿ: ಎ.25:ನೇಪಥ್ಯದಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಂಡಾಗ ನಾಟಕಗಳ ಪ್ರದರ್ಶನಕ್ಕೆ ಒಂದು ಕಳೆ ಬರುತ್ತದೆ ಎಂದು ಹಿರಿಯ ರಂಗಕಲಾವಿದ ಐ.ಎಸ್.ನವಲಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನ ಸುವರ್ಣಭವನ ಸಭಾಂಗಣದಲ್ಲಿ ರಂಗಮಾಧ್ಯಮ ಹವ್ಯಾಸಿ ನಾಟಕ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಆತ್ಮೀಯ ಸಾಧಕರ ಸಮಾಗಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವ್ಯಾಸಿ ತಂಡವನ್ನು ಕಟ್ಟಿಕೊಂಡು ನಾಟಕ ಆಡುವುದು ಕಷ್ಟಕರ ಎಂದು ಅವರು ಹೇಳಿದರು.
ರಾಜ್ಯದ ಉದ್ದಗಲ್ಲಕ್ಕೂ ವಿವಿಧೆಡೆ ನಾಟಕಗಳ ಪ್ರದರ್ಶನ ಕಾಣಲು ತಿರುಗಾಟವನ್ನು ಮಾಡಿರುವ ಅನುಭವದಲ್ಲಿ ಅಮೃತವಿದೆ. ಆದರೆ, ನೇಪಥ್ಯದಲ್ಲಿರುವ ಸಮಸ್ಯೆಗಳಿಗೆ ಬೆಳಕು ಮೂಡಿಸುವ ಚಾಣಕ್ಷತನ ನಮ್ಮಲ್ಲಿರಬೇಕು. ನಟನೆಗೆ ಸಮಯ ಕೊಡದ ಕಾರಣ ನಾಟಕ ಅಂದಚೆಂದಕ್ಕೆ ನೇಪಥ್ಯದಲ್ಲಿಯೇ ಕಾಯಕವನ್ನು ಮುಂದುವರೆಸಿಕೊಂಡು ನಾಟಕಗಳ ಯಶಸ್ವಿಗೆ ಕಾರಣವಾಗಿದ್ದನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ಎಪ್ಪತ್ತರ ದಶಕದಲ್ಲಿ ಕಲಬುರಗಿಯಲ್ಲಿ ಶ್ರೀರಂಗರ ನಾಟಕಗಳು ಉತ್ತಮ ಪ್ರದರ್ಶನ ಕಂಡಿವೆ. ಈಗಿನ ಸಂದರ್ಭಗಳಲ್ಲಿ ಶ್ರೀರಂಗರ ನಾಟಕಗಳ ಕುರಿತಾಗಿಯೇ ನಾಟಕೋತ್ಸವ ಏರ್ಪಡಿಸುವ ಮನೋಭಿಲಾಷೆ ತಮ್ಮದಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಖ್ಯಾತ ಶಿಲ್ಪಕಲಾವಿದ ಮಾನಯ್ಯ ಬಡಿಗೇರ ಮಾತನಾಡಿ, ಕೆತ್ತನೆಯ ಒಳಗಡೆಯ ಕೆಲಸವನ್ನು ಹೊರಗಡೆ ತಂದು ಸಾರ್ವಜನಿಕವಾಗಿ ಬಿಂಬಿಸುವಲ್ಲಿ ರಂಗಮಾಧ್ಯಮ ನಾಟಕ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುವೆ. ಕರ್ನಾಟಕ ಶಿಲ್ಪಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಕೀರ್ತಿ ಕಲಬುರಗಿ ಕಲಾಸಕ್ತರದ್ದಾಗಿದೆ ಎಂದರು. ರಂಗನಿರ್ದೇಶಕ ವಿಶ್ವರಾಜ ಪಾಟೀಲ ಮಾತನಾಡಿ, ಕಳೆದ 20 ವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನನಗೆ ರಂಗಸಾಧಕರ ಲೆಕ್ಕದಲ್ಲಿ ಮುಳಗಿಸಿದ್ದು ಗಮನಿಸಿದರೆ ನಾಟಕ ರಂಗದಲ್ಲಿ ದುಡಿದಿರುವುದಕ್ಕೆ ಸಾರ್ಥಕ ಎನಿಸಿದೆ ಎಂದು ಅವರು ತಿಳಿಸಿದರು. ಹಿರಿಯ ರಂಗಕಲಾವಿದೆ ಸೀತಾ ಮಲ್ಲಾಬಾದಿ ಮಾತನಾಡಿ, ನಾಟಕಗಳಲ್ಲಿ ಅಭಿನಯಿಸಿರುವ ಹಳೆಯ ನೆನಪುಗಳು ಮೆಲಕು ಹಾಕಿದರು. ಈ ಹಿಂದೆ ನಾಟಕಗಳಲ್ಲಿ ಮಹಿಳಾ ಪಾತ್ರಗಳು ವಿರಳ. ಮನೆಯಲ್ಲಿ ಬೆಂಬಲವಿಲ್ಲದೆ ಹೊರಬಾರದ ಸ್ಥಿತಿಯಲ್ಲಿ ನಾಟಕಗಳಲ್ಲಿ ಅಭಿಯಿಸಿರುವ ಕೀರ್ತಿ ಸಂತುಷ್ಟಗೊಳಿಸಿದೆ. ತವರಿನ ಈ ಸನ್ಮಾನ ಉಡುಗೊರೆಯಾಗಿ ಪರಿಣಮಿಸಿದೆ ಎಂದರು.
ಸಾಧಕರಾದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಹಿರಿಯ ಚಿತ್ರಕಲಾವಿದ ಮೋಹನ ಸೀತನೂರ ಅವರಿಗೂ ಸನ್ಮಾನಿಸಲಾಯಿತು. ರಂಗಕರ್ಮಿ ಕೆ.ಪಿ.ಗಿರಿಧರ ವೇದಿಕೆ ಮೇಲಿದ್ದರು. ರಂಗಸಂಘಟಕ ನಾರಾಯಣ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ರಂಗಕಲಾವಿದೆ ಶಾಂತ ಭೀಮಸೇನರಾವ ನಿರೂಪಿಸಿದರು. ವಿಠ್ಠಲ ಆಂದೋಲಾ ವಂದಿಸಿದರು. ಜಿಲ್ಲೆಯ ಹಿರಿಯ ಕಿರಿಯ ರಂಗಕಲಾವಿದರು ಹಾಜರಿದ್ದರು.