ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ, ಎ.೩೦- ತಾಲೂಕಿನ ಪಾಣೆಮಂಗಳೂರು ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಗುರುವಾರ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.

ಪುತ್ತೂರು ನಿವಾಸಿ ನಿರಂಜನ್ (೩೫) ಮೃತ ಯುವಕ. ಈತ ಬುಧವಾರ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾತ್ರಿ ಗೂಡಿನಬಳಿಯ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಬೈಕೊಂದು ನಿಂತಿತ್ತು. ಗುರುವಾರ ಬೆಳಗ್ಗೆಯೂ ಬೈಕ್ ಅಲ್ಲೇ ಇದ್ದುದರಿಂದ ಅನುಮಾನಗೊಂಡ ಗೂಡಿನಬಳಿ ಪರಿಸರದ ಯುವಕರು ನದಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಈಜುಗಾರರಾದ ಹಾರಿಸ್, ಮುಹಮ್ಮದ್ ಮಮ್ಮು, ಇಬ್ರಾಹೀಂ, ಅಮ್ಮಿ, ಇಕ್ಬಾಲ್, ಶಮೀರ್ ಅವರ ತಂಡ ಮೃತದೇಹವನ್ನು ನದಿಯಲ್ಲಿ ಪತ್ತೆ ಹಚ್ಚಿದೆ. ಬೈಕ್‌ನಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಮೃತ ಯುವಕನ ಹೆಸರು, ವಿಳಾಸ ಪತ್ತೆಯಾಗಿದೆ. ಮೃತ ನಿರಂಜನ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ವರ್ಷದ ಹಿಂದೆ ಊರಿಗೆ ಬಂದಿದ್ದರು. ವಿವಾಹಿತರಾಗಿರುವ ಅವರಿಗೆ ಒಂದು ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತನ ಕುಟುಂಬಿಕರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.