ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ಕಲಬುರಗಿ:ಆ.27:ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರು ಕೂಡಾ, ಮಾನವನ ಅಂಗಾಂಗಗಳನ್ನು ತಯಾರಿಸಲು ಸಾಧ್ಯವಿಲ್ಲ. ನಿಧನರಾದ ನಂತರ ಕಣ್ಣುಗಳನ್ನು ಮಣ್ಣು, ಬೆಂಕಿಪಾಲು ಮಾಡುವುದರ ಬದಲು ಅಂಧರಿಗೆ ದಾನ ಮಾಡಿ ಅವರ ಬಾಳಿಗೆ ಬೆಳಕಾಗುವ ಕಾರ್ಯಮಾಡುವಂತೆ ನೇತ್ರಾಧಿಕಾರಿ ಡಾ.ದಸ್ತಗಿರ್ ಸಲಹೆ ನೀಡಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಜ್ಯೋತಿ ಐ ಕೇರ್ ಕ್ಲಿನಿಕ್’ ಸಹಯೋಗದೊಂದಿಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ’38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

   ಪ್ರತಿಯೊಬ್ಬರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಗಾಗ್ಗೆ ಸ್ವಚ್ಚ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಮೇಲಿಂದ-ಮೇಲೆ ಕಣ್ಣುಗಳನ್ನು ಸ್ಪರ್ಶಿಸಬಾರದು. ನಿಯಮಿತ ಹಾಗೂ ಪೌಷ್ಠಿಕಾಂಶಗಳುಳ್ಳ ಆಹಾರದ ಸೇವೆನೆ, ಸೂಕ್ತ ನಿದ್ರೆ, ಕಣ್ಣಿಗೆ ವಿಶ್ರಾಂತಿ, ವಿಟಾಮಿನ್-ಎ ಹೊಂದಿರುವ ಗಜ್ಜರಿಯಂತಹ ತರಕಾರಿ, ಹಣ್ಣು ಹೆಚ್ಚಿನ ಸೇವನೆ ಮಾಡಬೇಕು. ವ್ಯಾಯಾಮ, ಧ್ಯಾನ ಮಾಡುವುದು, ಮಂದ ಬೆಳಕಿನಲ್ಲಿ ಮತ್ತು ಅತ್ಯಂತ ಸಮೀಪದಿಂದ ಓದುವುದು, ಟಿವಿ, ಮೋಬೈಲ್ ಹೆಚ್ಚಿನ ವೀಕ್ಷಣೆ ಬೇಡ. ಪ್ರತಿ ಆರು ತಿಂಗಳಿಗೊಮ್ಮೆ ನುರಿತ ನೇತ್ರ ತಜ್ಞರಿಂದ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ತ್ರಾಟಕ್‍ವನ್ನು ಮಾಡುವುದರಿಂದ ಕಣ್ಣಿನ ಆರೋಗ್ಯ, ತೇಜಸ್ಸು ವೃದ್ಧಿಯಾಗುತ್ತದೆ ಎಂದು ಕಣ್ಣಿಗೆ ಸಂಬಂಧಿಸಿದಂತೆ ಅನೇಕ ಸಲಹೆಗಳು, ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
  ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಸಾನಿಯಾ ಶೇಖ್, ಶಬಾನಾ ಅಸ್ಲಾಂ ಶೇಖ್, ಸುನಂದಾ ತಮ್ಮಾಣಿ, ಪಾಯಲ್ ಹಿಬಾರೆ, ಐಶ್ವರ್ಯ ಬಿರಾದಾರ, ಶ್ರುತಿ ಶಿರೂರ್,ಶಿವಶರಣಯ್ಯ, ವಿನಾಯಕ, ಪ್ರಜ್ವಲ್, ವೈಭವ, ಪುಷ್ಪಾ, ಹಣಮಂತ, ನಮಬಿಲಾಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.