ನೇತ್ರದಾನ ಅತ್ಯತ್ತಮ ಮಾನವೀಯ ಸೇವೆ

ಕೋಲಾರ, ಆ,೩೦-ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠದಾನ ಜಿಲ್ಲೆಯಲ್ಲಿನ ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ದೃಷ್ಟಿಯನ್ನು ತಮ್ಮ ಜೀವಿತಾವಧಿಯ ನಂತರ ಮತ್ತಿಬ್ಬರಿಗೆ ನೀಡಬಹುದಾಗಿದೆ. ಆ ಮೂಲಕ ತಮ್ಮ ಕಣ್ಣುಗಳನ್ನು ತಮ್ಮ ನಂತರವು ಈ ಸುಂದರವಾದ ಪ್ರಪಂಚವನ್ನು ನೋಡಲು ಬಳಸಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ Pರ್ಯನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ ಜಿಲ್ಲೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ, ೩೮ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರತಿ ವರ್ಷ ಅಂದಾಜು ೧.೫ ಲಕ್ಷ ಜನರು ಕಾರ್ನಿಯಾ ಸಂಬಂಧಿತ ಅಂಧತ್ವದಿಂದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿರುತ್ತಾರೆ ಆದರೆ ಸರಾಸರಿ ೫೬೦೦ ನೇತ್ರದಾನಗಳಾಗುತ್ತಿವೆ. ಈ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಮಾಜಿಕ ಬದ್ದತೆಯಿಂದ ಹಾಗೂ ಸ್ವಯಂ ಪ್ರೇರಿತವಾಗಿ ನೇತ್ರದಾನವನ್ನು ಮಾಡಲು ಸಾರ್ವಜನಿಕರು ಮುಂದೆ ಬರಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ೨೭ ನೇತ್ರ ಬ್ಯಾಂಕ್‌ಗಳು ಸೇವೆ ಸಲ್ಲಿಸುತ್ತಿದ್ದು, ಅವುಗಳಲ್ಲಿ ೭ ಸರ್ಕಾರಿ ಸ್ವಾಮ್ಯದಲ್ಲಿದೆ ವ್ಯಕ್ತಿಯ ಮರಣಾನಂತರವೆ ನೇತ್ರದಾನ ಮಾಡವುದು. ಮರಣಾನಂತರವು ಸಹ ನಮ್ಮ ನೇತ್ರಗಳು ಜೀವಂತವಾಗಿರುತ್ತದೆ ನೇತ್ರದಾನಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಒಬ್ಬ ವ್ಯಕ್ತಿಯು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡಬಹುದಾಗಿದೆ. ನೇತ್ರ ಸಂಗ್ರಹಣೆ ಮಾಡುವ ಪ್ರಕ್ರಿಯೆಗೆ ಕೇವಲ ೨೦ ನಿಮಿಷ ಸಾಕಾಗುತ್ತದೆ ಹಾಗೂ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇದಭಾವವಿಲ್ಲದೆ ಎಲ್ಲರೂ ನೇತ್ರದಾನ ಮಾಡಬಹುದಾಗಿದೆ. ರಕ್ತದ ಒತ್ತಡ ಸಕ್ಕರೆ ಕಾಯಿಲೆ, ಕಣ್ಣಿನ ಪೊರೆ ಮುಂತಾದ ಯಾವುದು ನೇತ್ರದಾನಕ್ಕೆ ಅಡ್ಡಿಯಾಗುವುದಿಲ್ಲ. ನೇತ್ರ ಸಂಗ್ರಹಣೆ ಹಾಗೂ ವಿತರಣೆ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಒಬ್ಬ ವ್ಯಕ್ತಿಯ ಮರಣದ ನಂತರ ಮನೆ ಆಸ್ಪತ್ರೆ ಅಥವಾ ಶವಾಗಾರ ಮುಂತಾದ ಯಾವುದೇ ಸ್ಥಳಗಲ್ಲಿ ನೇತ್ರ ಸಂಗ್ರಹಣೆ ಮಾಡಬಹುದಾಗಿದೆ ಎಂದು ವಿವರಿಸಿದರು,
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ. ಪದ್ಮ ಬಸವಂತಪ್ಪ ರವರು ಸ್ವತಃ ತಮ್ಮ ನೇತ್ರದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಾರ್ಥಕತೆಯನ್ನು ತಂದರು. ಅಲ್ಲದೆ ಸಭಿಕರೆಲ್ಲರೂ ಜೀವಸಾರ್ಥಕತೆ ವೆಬ್‌ಸೈಟ್ ಮೂಲಕ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೀವಸಾರ್ಥಕತೆ ವೆಬ್‌ಸೈಟ್‌ನಲ್ಲಿ ನೇತ್ರದಾನ ನೋಂದಣಿಗಾಗಿ ಕ್ಯೂಆರ್ ಕೋಡ್ ಹೊಂದಿರುವ ಭಿತ್ತಿ ಪತ್ರಗಳನ್ನು ಹಾಗೂ ನೇತ್ರದಾನದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಾರ್ವಜನಿಕರು ನೇತ್ರದಾನವನ್ನು ನೋಂದಣಿ ಮಾಡಲು ಜೀವಸಾರ್ಥಕತೆ ವೆಬ್‌ಸೈಟ್ ಗೆ https://www.jeevasarthakathe.karnataka.gov.in ಭೇಟಿ ಮಾಡಿ ಅಥವಾ ೨೪*೭ ಉಚಿತ ಆರೋಗ್ಯ ಸಹಾಯವಾಣಿ ೧೦೪ ಕ್ಕೆ ಕರೆ ಮಾಡಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಎಂ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ವಿಜಯ್ ಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗಳಾದ ಡಾ|| ಎನ್.ಸಿ. ನಾರಾಯಣಸ್ವಾಮಿ, ಆರ್.ಸಿ.ಹೆಚ್ ಅಧಿಕಾರಿ ಡಾ|| ವಿಜಯ ಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಚಾರಿಣಿ, ಕೋಲಾರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.