
ಮಾನ್ವಿ,ಆ.೨೯ – ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಅನುಪಮವಾದದು ಶರಣ ಸಾಹಿತ್ಯ ಸಕ್ಕರೆಯ ಸವಿಯಂತೆ ಸೊಗಸು ಜೇನಿನಂತೆ ಮಧುರ ಅದೊಂದು ಅಮೃತ ಭೋಜನ, ವಚನ ಸಾಹಿತ್ಯದ ಆನಂದ ಸಾಗರದಷ್ಟು ಹಿರಿದು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು
ಅವರು ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದಿಂದ ಆಯೋಜಿಸಿದ್ದ ’ವಚನದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ವಚನಗಳಲ್ಲಿ ಸುಂದರ ಬದುಕಿನ ಸೂತ್ರಗಳಿವೆ,ನೈತಿಕ ಮೌಲ್ಯಗಳ ಬಹುದೊಡ್ಡ ಜ್ಞಾನದ ರಾಶಿಯೇ ಇದೆ, ಅವುಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡು ಕಾಯಕತತ್ವ ಮೈಗೂಡಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಯಾಳಗಿ ಅವರು ಹೇಳಿದರು.
ಖ್ಯಾತ ವೈದ್ಯರಾದ ಡಾ.ಚಂದ್ರಶೇಖರಯ್ಯ ಸುವರ್ಣಗಿರಿಮಠ ಅವರು “ವಚನ ಸಾಹಿತ್ಯ ದ ಪ್ರಸ್ತುತತೆ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹೆಚ್.ಟಿ.ಪ್ರಕಾಶಬಾಬು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷ ಕೆ.ಈ. ನರಸಿಂಹ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾಜಿ ಶಾಲೆಯ ವಿದ್ಯಾರ್ಥಿಗಳಿಂದ ವಚನ ಕಂಠಪಾಠ ಗಾಯನ ನಡೆಯಿತು
ಕುಮಾರಿ ಜಯಶ್ರೀ ಪ್ರಾರ್ಥಿಸಿದರು. ಶಿಕ್ಷಕಿ ವಿನೂತ ಸ್ವಾಗತಿಸಿದರು. ಶಿಕ್ಷಕರಾದ ರಹೀಂ ಕಾರ್ಯಕ್ರಮ ನಿರೂಪಿಸಿದರು.