ನೇತಾಜಿ ಸಮರಶೀಲ ಹೋರಾಟದ ಪ್ರತೀಕ”


ಸಂಜೆವಾಣಿ ವಾರ್ತೆ
ಹೊಸಪೇಟೆ, ಜ.07:  ಪಟ್ಟಣದ ವಾಲ್ಮೀಕಿ ಐಟಿಐ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಸಂಘಟನೆಯ ವತಿಯಿಂದ ಆಚರಿಸಲಾಯಿತು.
“ಸ್ವತಂತ್ರ ಸಂಗ್ರಾಮದಲ್ಲಿ ಭಾರತೀಯ ಉದಯೋನ್ಮುಖ ಬಂಡವಾಳಶಾಹಿಗಳು ವಿದೇಶಿ ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಮತ್ತು ಭಾರತೀಯ ಜಮೀನ್ದಾರಿ ವ್ಯವಸ್ಥೆಯ ರಾಜರೊಂದಿಗೆ ರಾಜಿ ಮಾಡಿಕೊಳ್ಳುವ ಉದ್ದೇಶದಿಂದಾಗಿ ಹೋರಾಟವು ಮಂದಗತಿಯಲ್ಲಿ, ಒಪ್ಪಂದಗಳನ್ನು, ಸವಿನಯಕಾನೂನುಭಂಗ ಚಳುವಳಿಗಳ ರೂಪದಲ್ಲಿ ಕಾಣುತ್ತಿತ್ತು. ನೇತಾಜಿಯವರು ಒಪ್ಪಂದದ ದಾರಿಗಳನ್ನು ಮುಚ್ಚಿದರು, ಹಳೆಯ ಮತ್ತು ಹೊಸ ಶೋಷಣಾ ಶಕ್ತಿಗಳೊಂದಿಗೆ ರಾಜಿ ರಹಿತ ಹೋರಾಟಕ್ಕೆ ಕರೆಕೊಟ್ಟರು. ಇದರಿಂದಾಗಿ ವಿದೇಶಿ ಆಳ್ವಿಕರಾದ ಬ್ರೀಟಿಷರಿಗೆ, ಭಾರತೀಯ ಬಂಡವಾಳಶಾಹಿಗಳಿಗೆ ಮತ್ತು ರಾಜಿಪಂಥದ ನಾಯಕರಿಗೆ ಅಸಮಾಧಾನಕ್ಕೆ ಕಾರಣವಾಯಿತು.” ಎಂದು ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಪ್ರಕಾಶ್ ನಾಯಕ್ ಚರಿತ್ರೆಯ ಸಂಗತಿಗಳನ್ನು ನೆನಪಿಸಿಕೊಂಡರು.
“ಇಂದು ಧರ್ಮದ ಅಮಲು ಮತ್ತು ಶ್ರೀಮಂತರ ಹಂಗಿನಲ್ಲಿ ಒಳಗಾಗದೇ ನೈಜ್ಯ ಮನುಷ್ಯನಾಗಿ ಬದುಕಲು ಇಂದು ನೇತಾಜಿ ಅವರ ರಾಜಿರಹಿತ ಹೋರಾಟದ ಗುಣಗಳನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ.” ಎಂದು ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಅಜ್ಜಯ್ಯ ಸಂಡೂರು ಅಭಿಪ್ರಾಯಪಟ್ಟರು.
“ಸ್ವತಂತ್ರ ಸಂಗ್ರಾಮದಲ್ಲಿ ಲಿಂಗ ತಾರತಮ್ಯವಿಲ್ಲದ, ಜಾತಿ ತಾರತಮ್ಯವಿಲ್ಲದ, ಕೋಮುಭಾವನೆ ಇಲ್ಲದ, ಶೋಷಣೆ ಇಲ್ಲದ ಸಮಾಜವನ್ನು ಕಟ್ಟಬೇಕು ಎಂಬುದು ನೇತಾಜಿ ಮತ್ತು ರಾಜಿರಹಿತ ಕ್ರಾಂತಿಕಾರಿಗಳ ಉದ್ದೇಶವಾಗಿತ್ತು ಎಂಬುದನ್ನು ತಿಳಿಯುವ ಜರೂರು ಇಂದಿನ ವಿದ್ಯಾರ್ಥಿಗಳಿಗೆ ಇದೆ” ಎಂದು ವಾಲ್ಮೀಕಿ ಐಟಿಐ ಕಾಲೇಜು ಉಪನ್ಯಾಸಕರಾದ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಹೇರಾ, ಮಮತಾ, ಪಂಪಾಪತಿ, ಮಧು ಉಪನ್ಯಾಸಕರು ಹಾಗೂ ನೂರಾರು ಐಟಿಐ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.