ನೇಣು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆ ಶಂಕೆ

ಕಲಬುರಗಿ,ಆ.13-ಇಲ್ಲಿನ ಕನಕ ನಗರದ ಮನೆಯೊಂದರಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಶೇಖಯ್ಯ ಲಚಮಯ್ಯ ಗುತ್ತೇದಾರ (40) ಎಂಬುವವರ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದ್ದು, ತನ್ನ ಪತಿಯ ಸಾವಿನಲ್ಲಿ ಸಂಶಯವಿದೆ ಎಂದು ಅವರ ಪತ್ನಿ ಸಂಗೀತಾ ಶೇಖಯ್ಯ ಗುತ್ತೇದಾರ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆಟೋ ಚಾಲಕರಾಗಿದ್ದ ಶೇಖಯ್ಯ ಗುತ್ತೇದಾರ ಅವರ ಎಡಗಾಲು ಕತ್ತರಿಸಿದ್ದರಿಂದ ಕಾಲು ನೋವು ಹೆಚ್ಚಾಗಿ ಅಲ್ಲಲ್ಲಿ ಆಸ್ಪತ್ರೆಗೆ ತೋರಿಸಲಾಗಿತ್ತು. ಸಂಗೀತಾ ಅವರು ಆ.11 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಾಯಂಕಾಲ ಮರಳಿ ಮನೆಗೆ ಬರುವುದರೊಳಗೆ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶೇಖಯ್ಯ ಅವರ ಶವ ಪತ್ತೆಯಾಗಿದ್ದು, ತನ್ನ ಪತಿಯ ಸಾವಿನ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರ್.ಜಿ.ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.