ನೇಕಾರ ನಗರ ಮುಖ್ಯರಸ್ತೆ ಶೀಘ್ರ ಅಭಿವೃದ್ಧಿ- ಅಬ್ಬಯ್ಯ

ಹುಬ್ಬಳ್ಳಿ,ಡಿ23 ಹಳೇ ಹುಬ್ಬಳ್ಳಿ ನೇಕಾರನಗರ ಬಸವೇಶ್ವರ ವೃತ್ತದಿಂದ ತಿಮ್ಮಸಾಗರ ಮುಖ್ಯರಸ್ತೆವರೆಗಿನ ರಸ್ತೆಯನ್ನು ಶೀಘ್ರವೇ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ತಿಳಿಸಿದರು.
ಇಲ್ಲಿನ ವಾರ್ಡ ನಂ. 63ರ ರಣದಮ್ಮ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಜನರ ಕುಂದುಕೊರತೆ ಆಲಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೇಕಾರನಗರ ಭಾಗದ ಸಂತೋಷ ನಗರ, ಮಹಾಲಕ್ಷ್ಮೀ ಕಾಲನಿ, ಎಸ್.ಕೆ. ಕಾಲನಿ, ರೇಣುಕಾ ಕಾಲನಿ, ಧಾರವಾಡ ಪ್ಲಾಟ್, ಬೇಪಾರಿ ಪ್ಲಾಟ್, ಅಜ್ಮೀರಿಯಾ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳ ಒಳ ರಸ್ತೆಗಳನ್ನು ಕೋಟ್ಯಂತರ ರೂ. ಅನುದಾನದಲ್ಲಿ ಕಾಂಕ್ರೀಟಿಕರಣಗೊಳಿಸಿದ್ದು, ತಿಮ್ಮಸಾಗರ ಮುಖ್ಯರಸ್ತೆವರೆಗಿನ ನೇಕಾರನಗರ ರಸ್ತೆಯನ್ನೂ ಶೀಘ್ರವೇ ಅಭಿವೃದ್ಧಿಪಡಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ರಣದಮ್ಮ ಕಾಲನಿಯಲ್ಲಿ ಈಗಾಗಲೇ ಲಕ್ಷಾಂತರ ರೂ. ವೆಚ್ಚದಲ್ಲಿ ತೆರೆದ ಚರಂಡಿ, 37ಲಕ್ಷ ರೂ. ವೆಚ್ಚದಲ್ಲಿ ಕಾಳಿಕಾದೇವಿ ಸಮುದಾಯ ಭವನ ಹಾಗೂ 28 ಲಕ್ಷ ರೂ. ಅನುದಾನದಲ್ಲಿ ತುಳಜಭವಾನಿ ದೇವಸ್ಥಾನದ ಸಮುದಾಯ ನಿರ್ಮಿಸಿದ್ದು, ಇಲ್ಲಿನ ಪ್ರಮುಖ ಬೇಡಿಕೆಗಳಾದ ಕಾಲನಿಯ 6 ರಸ್ತೆಗಳ ಅಭಿವೃದ್ಧಿ, ಬೀದಿದೀಪ, ಚೇಂಬರ್ ಕವರ್ ಅಳವಡಿಕೆ, ಹೊಸ ಅಂಗನವಾಡಿ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಶಾಸಕರು, ಪ್ರತಿ 2-3 ತಿಂಗಳಿಗೊಮ್ಮೆ ಇಂಥ ಸಭೆಗಳನ್ನು ಆಯೋಜಿಸಿ ಜನರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದರು.
ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ನರಸಿಂಹ ಜೋಡಳ್ಳಿ, ಸುರೇಶ ಮಾನಶೆಟ್ಟರ್, ಸಂಕಣ್ಣ ಹೊನ್ನಳ್ಳಿ, ಈಶ್ವರ ಮಲ್ಲಾಪುರ, ಗಿರೀಶ ಮಾನಶೆಟ್ಟರ್, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಸತೀಶ, ಬಸಪ್ಪ ಕುಂದರಗಿ, ಯಲ್ಲಪ್ಪ, ಸಂತೋಷ ಕಾಂಬ್ಳೆ, ಶಂಕರ್ ತಿಪ್ಪಣ್ಣಗೌಡರ, ಮಂಜುನಾಥ ಕಣಕಿ, ಗಣೇಶ ಬ್ಯಾಡಗಿ, ರಾಘವೇಂದ್ರ ವದ್ದಿ, ಪಾಲಿಕೆ ಅಧಿಕಾರಿ ರಿಯಾಜ್, ಇತರರು ಇದ್ದರು.