ನೇಕಾರರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಫೆ.24: ನೇಕಾರರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಪೂರಕ ಆಯ ವ್ಯಯದಲ್ಲಿ 100 ಕೋಟಿ ಘೋಷಣೆ ಮಾಡಿ ಬಿಡುಗಡೆಗೊಳಿಸುವಂತೆ ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ನಿಗಮಕ್ಕೆ ನೇಕಾರ ಸಮುದಾಯದವರ ಸಮಸ್ಯೆಗಳನ್ನು ಪರಿಹರಿಸುವಂತ ನಿಗಮಕ್ಕೆ ಅಧ್ಯಕ್ಷರನ್ನು ಸಮಾಜದವರಿಗೆ ನೇಮಕ ಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಜಿಲ್ಲಾ ನೇಕಾರ ಒಕ್ಕೂಟದ ವತಿಯಿಂದ ನೇಕಾರರು ಬೃಹತ್ ಪ್ರತಿಭಟನೆಯನ್ನು ಮಾಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ ಆವರಣದಲ್ಲಿ ಸೇರಿ, ಮಾಲಾರ್ಪಣೆ ಮಾಡಿ, ಹೋರಾಟ ಪ್ರಾರಂಭಿಸಿದ ನೇಕಾರರು, ನಂತರ ಬಸವೇಶ್ವರರ ಮೂರ್ತಿ, ಡಾ. ಬಾಬು ಜಗಜೀವನರಾಮ್ ಅವರ ಮೂರ್ತಿ ಮತ್ತು ಸರ್ದಾರ್ ವಲ್ಲಭಭಾಯಿ ಮೂರ್ತಿಗೆ ಗೌರವ ಸಲ್ಲಿಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, 11ನೇ ಶತಮಾನದಲ್ಲಿಯೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ರಚಿಸಿದ ಆದ್ಯ ವಚನಕಾರ, ವಿಶ್ವ ಮಾನ್ಯ ಶರಣ, ಸದ್ಗುರು ದಾಸಿಮಯ್ಯನವರ ತತ್ವ, ಸಿದ್ದಾಂತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ, ಪ್ರಸಾರ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ದಾಸಿಮಯ್ಯನವರ ಜೀವನ ಚರಿತ್ರೆಯನ್ನು ಸಮರ್ಪಕವಾಗಿ ಪ್ರಸ್ತುತಪಡಿಸಲು ಇತಿಹಾಸ ತಜ್ಞರ ಸಮಿತಿಯನ್ನು ಪ್ರಮುಖರ ಆದ್ಯತೆ ಮೇರೆಗೆ ರಚಿಸಬೇಕು ಎಂದು ಆಗ್ರಹಿಸಿದರು.
ವಚನ ಸಾಹಿತ್ಯವನ್ನು ವಿಶ್ವವ್ಯಾಪ್ತಿಗೊಳಿಸಲು ಯಾದಗಿರಿ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗಾಗಿ 1100 ಕೋಟಿ ರೂ.ಗಳನ್ನು ಮೀಸಲಿಡುವಂತೆ, ದಾಸಿಮಯ್ಯನವರ ಜನ್ಮ ಸ್ಥಳವನ್ನು ಅಭಿವೃದ್ಧಿಗೊಳಿಸಲು ಮುದನೂರ್ ಪ್ರಾಧಿಕಾರ ರಚಿಸುವಂತೆ, ವಚನ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಶಿವಾನುಭವ ಮಂಟಪ ಸ್ಥಾಪಿಸುವಂತೆ, ದಾಸಿಮಯ್ಯನವರು ಸ್ಥಾಪಿಸಿದ ಸಪ್ತ ತೀರ್ಥಗಳು ಪುನರ್ ರಚನೆಗೆ ಯೋಜನೆ ರೂಪಿಸುವಂತೆ, ದಾಸಿಮಯ್ಯನವರ ಜೀವನ ಕತೆ, ಬದುಕು, ಸಾಹಿತ್ಯ, ಸಂದೇಶಗಳು ಪ್ರತಿ ಮನಕ್ಕೆ ಮುಟ್ಟುವಂತೆ ಸರ್ಕಾರವೇ ಒಂದು ಚಲನಚಿತ್ರ ನಿರ್ಮಾಣ ಮಾಡುವಂತೆ ಅವರು ಒತ್ತಾಯಿಸಿದರು.
ನೇಕಾರ ಸಮುದಾಯದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ, ಕೈಮಗ್ಗ ಗುಡಿ ಕೈಗಾರಿಕೆ ಉತ್ತೇಜಿಸುವ ಹಾಗೂ ಪ್ರೋತ್ಸಾಹದಾಯಕ ತರಬೇತಿ ಮುಖ್ಯ ಕೇಂದ್ರವನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಂತೆ, ದಾಸಿಮಯ್ಯನವರ ಸಂಜಾತರಾದ ವಚನ ಸಾಹಿತ್ಯ ಪಿತಾಮಹ ಡಾ. ಫ.ಗು ಹಳಕಟ್ಟಿಯವರ ಸ್ಮಾರಕವನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರದೀಪ್ ಗಣೇಶ್ ಸಂಗಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಯಳಸಂಗಿ, ಸಂಘಟನಾ ಕಾರ್ಯದರ್ಶಿ ಹಣಮಂತ್ ಕಣ್ಣಿ, ಉಪಾಧ್ಯಕ್ಷ ಸಿಂಘಾಡೆ ನಾರಾಯಣರಾವ್, ಮಲ್ಲಿನಾಥ್ ನಿಂಬಾಳ್ ಮಾದನ ಹಿಪ್ಪರಗಾ, ಗುರುರಾಜ್ ಚಿಮದಿ ಸುಲ್ತಾನಪೂರ್, ರೇವಣಸಿದ್ದಪ್ಪಾ ಗಡ್ಡದ್, ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ಖಜಾಂಚಿ ಶ್ರೀನಿವಾಸ್ ಬಲಪೂರ್, ಸದಸ್ಯರಾದ ಡಾ. ಬಸವರಾಜ್ ಚನ್ನಾ, ನ್ಯಾಯವಾದಿ ಜೇನವೆರಿ ವಿನೋದಕುಮಾರ್, ಸತೀಶ್ ಜಮಖಂಡಿ, ಸಂತೋಷ್ ಗುರಮಿಟಕಲ್, ಭಂಡಾರಿ ರಾಜಗೋಪಾಲ್, ಉತ್ತರ ಮತಕ್ಷೇತ್ರದ ನೇಕಾರ ಪ್ರಕೋಷ್ಠದ ಸಂಚಾಲಕ ಮಹಾದೇವಪ್ಪಾ ಘಾಳೆ, ವೆಂಕಟೇಶ್ ಬಲಪೂರ್, ವೀರಸಂಗಪ್ಪ ಬಳ್ಳಾ, ಕಾರ್ಯಕಾರಿಣಿ ಸದಸ್ಯ ಕುಶಾಲ್ ಯಡವಳ್ಳಿ, ಸಂತೋಷ್ ಲಖಮಣ್, ಒಕ್ಕೂಟದ ಯುವ ಘಟಕದ ಅಧ್ಯಕ್ಷ ಲಕ್ಷಿಕಾಂತ್ ಜೋಳದ್, ರವಿ ಯಳಸಂಗಿ, ಅಲ್ಲದೇ ಚಿತ್ತಾಪುರ, ಜೇವರ್ಗಿ, ಯಡ್ರಾಮಿ, ಮಾದನಹಿಪ್ಪರಗಾ ಘಟಕ, ಕಮಲಾಪೂರ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.