ನೇಕಾರರಿಗೂ ಪ್ಯಾಕೇಜ್ ನೀಡಲು ಸಿಎಂಗೆ ಮನವಿ

ಗುಳೇದಗುಡ್ಡ ಮೇ.21- ಸರ್ಕಾರ ಘೋಷಿಸಿರುವ 1250 ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಹೂ ಬೆಳೆಗಾರರು, ಕಟ್ಟಡ ಕಾರ್ಮಿಕರು, ರಸ್ತೆಬದಿ ವ್ಯಾಪಾರಿಗಳು, ಆಟೋರಿಕ್ಷಾ ಚಾಲಕರಿಗೆ ಸೇರಿದಂತೆ ಶ್ರಮಿಕ ವರ್ಗವದವರಿಗೆ ಪರಿಹಾರ ನೀಡಿದ್ದು ಸರ್ಕಾರದ ಕ್ರಮ ಸ್ವಾಗತಾರ್ಹ, ಅದರಂತೆ ಸಂಕಷ್ಟಕ್ಕೆ ಸಿಲುಕಿರುವ ಸಮಗ್ರ ನೇಕಾರರಿಗೂ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ನೇಕಾರರ ನೆರವಿಗೆ ಧಾವಿಸುವಂತೆ ಕರ್ನಾಟಕ ರಾಜ್ಯ ನೇಕಾರ ಮಹಾಸಭಾ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿ.ಎಸ್. ಸೋಮಶೇಖರ ಅವರು, ಪಾರಂಪರಿಕವಾಗಿ ನೇಕಾರಿಕೆ ವೃತ್ತಿಯನ್ನೇ ನಂಬಿದ ಅನೇಕ ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಕಾರಣ ರಾಜ್ಯಾದ್ಯಂತ ಇರುವ ಎಲ್ಲ ನೇಕಾರರ ಸ್ಥಿತಿ ಇಂದು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನೇಕಾರರಿಗೆ ಪ್ಯಾಕೇಜ್ ಘೋಷಿಸಿ ನೇಕಾರರ ಸಂಕಷ್ಟ ಪರಿಹರಿಸುವ ಅಗತ್ಯವಿದೆ. ರಾಜ್ಯಾದ್ಯಂತ ನೇಕಾರ ಕುಟುಂಬಗಳು ಸರಕಾರದ ನೆರವಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿವೆ. ನೇಕಾರಿಕೆ ಬಿಟ್ಟು ಬೇರೇ ವೃತ್ತಿ ಮಾಡಲಾಗದೇ ಅನೇಕ ಕುಟುಂಬಗಳು ಅತಂತ್ರಗೊಂಡಿವೆ. ಸಾಲ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಆಧುನಿಕ ಮಗ್ಗಗಳನ್ನು ಹಾಕಿಕೊಂಡಿರುವ ಕಷ್ಟ ಹೇಳ ತೀರದಾಗಿದೆ. ಲಾಕ್‍ಡೌನ್‍ನಿಂದ ಮದುವೆಗಳ ರದ್ದು ಯಾವುದೇ ಶುಭ ಸಮಾರಂಭಗಳು ನಡೆಯದಾಗಿವೆ. ಕಚ್ಚಾ ಮತ್ತು ಪಕ್ಕಾ ಮಾಲುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದೇ ನೇಕಾರರ ಪಾಲಿಗೆ ಕೋವಿಡ್ ಅಡ್ಡಿಯಾಗಿದೆ. ನೇಕಾರರ ಸಂಕಷ್ಟವನ್ನು ಸರಕಾರ ಆಲಿಸಿ ಸೂಕ್ತ ನೆರವು ನೀಡುವ ಉದಾರತೆ ತೋರುವಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ಕರ್ನಾಟಕ ರಾಜ್ಯ ನೇಕಾರ ಮಹಾಸಭಾ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ ಅವರು ಮನವಿ ಮಾಡಿದ್ದಾರೆ.