ನೆಹರೂಗೆ ಮಗುವಿನ ಮನಸ್ಸು-ರಮೇಶ್

ವಿಜಯಪುರ,ನ೧೭: ಜವಹರಲಾಲ್ ನೆಹರುರವರು ರಾಜಕೀಯವಾಗಿ ದೇಶದ ಪ್ರಥಮ ಪ್ರಧಾನಿಯಾಗಿ ಅತ್ಯಂತ ಕ್ಲಿಷ್ಟ ಸಂದರ್ಭಗಳನ್ನು ಎದುರಿಸಿ, ಆಡಳಿತ ನಡೆಸಿದರೂ ಸಹ ಅವರ ಹೃದಯ ಮಾತ್ರ ಮಗುವಿನಂತಹ ಎಳೆಯ ಮನಸ್ಸಿನಂತಹದ್ದಾಗಿದ್ದು, ಅದಕ್ಕಾಗಿಯೇ ನೆಹರುರವರು ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕೆಂದು, ಸೂಚಿಸಿದ್ದರು ಎಂದು ಭಾರತೀಯ ಸೀನಿಯರ್ ಛೇಂಬರ್‌ನ ವಿಜಯಪುರ ಘಟಕದ ಅಧ್ಯಕ್ಷ ವಿ.ಎನ್.ರಮೇಶ್ ತಿಳಿಸಿದರು.
ಅವರು ಇಲ್ಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರತೀಯ ಸೀನಿಯರ್ ಛೇಂಬರ್‌ನ ವತಿಯಿಂದ ಜವಹರಲಾಲ್ ನೆಹರೂರವರ ೧೩೧ ನೇ ಜನ್ಮದಿನಾಚರಣೆ ಪ್ರಯುಕ್ತ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಣ್ಣು, ಹಂಪಲು ವಿತರಿಸಿ, ಮಾತನಾಡುತ್ತಿದ್ದರು.
ಛೇಂಬರ್‌ನ ನಿರ್ದೇಶಕರಾದ ಎಂ.ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯಾ ನಂತರ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದಂತಹ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಕೃಷಿ ಹಾಗೂ ಕೈಗಾರಿಕೆಗಳಲ್ಲಿ ಸ್ವಾವಲಂಬಿಯಾಗುವಂತಹ ಯೋಜನೆಗಳನ್ನು ರೂಪಿಸಿದ ಕರ್ತೃ ಎಂದು ತಿಳಿಸಿದರು.
ಸೀನಿಯರ್ ಛೇಂಬರ್‌ನ ನಿಕಟ ಪೂರ್ವ ಅಧ್ಯಕ್ಷ ಎನ್.ಸುಬ್ರಮಣ್ಯ ಶೆಟ್ಟಿ, ನಿರ್ದೇಶಕರಾದ ಜೆ.ಆರ್.ಮುನಿವೀರಣ್ಣ, ವೇದಿಕೆಯ ಘಟಕದ ಪತ್ರಿಕೆಯ ಸಂಪಾದಕ ಎಂ.ಶಿವಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ಸೂಪರಿಡೆಂಟೆಂಡ್ ಸುಧಾ, ಹಿರಿಯ ಆರೋಗ್ಯ ಸಹಾಯಕಿಯರಾದ ಶಾಂತಮ್ಮ, ಲಲಿತಾಂಬರವರುಗಳು ಇದ್ದರು.