ನೆಹರು ಸಿದ್ಧಾಂತ ನಾಶ ಆರ್‌ಎಸ್‌ಎಸ್ ತತ್ವ ಮೋದಿ ಪಠಣ

KPCC

ಬೆಂಗಳೂರು, ನ. ೧೪- ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಸಿದ್ದಾಂತವನ್ನು ಕೇಂದ್ರ ಸರ್ಕಾರ ನಾಶ ಮಾಡಿ ಆರ್‌ಎಸ್‌ಎಸ್ ಸಿದ್ದಾಂತದ ಮೇಲೆ ಮೋದಿ ಸರ್ಕಾರ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ದೂರಿದರು.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ದಿ. ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೆಹರು ಸಿದ್ದಾಂತವನ್ನು ನಾಶ ಮಾಡಿ ಅವರ ಹೆಸರು ನೆನಪಿನಲ್ಲಿರದಂತೆ ಅಳಿಸಿಹಾಕಲು ಹೊರಟಿದೆ. ಸುಳ್ಳನ್ನು ಬರೆದು ಮಾಧ್ಯಮದಲ್ಲಿ ಹಾಕಲಾಗುತ್ತಿದೆ ಎಂದು ಟೀಕಿಸಿದರು.
ನೆಹರು ಎಂದರೆ ಅಭಿವೃದ್ಧಿ ಎಂಬುದು ಜನರಿಗೆ ಗೊತ್ತಾಗುತ್ತದೆ. ಹಾಗಾಗಿ ನೆಹರು ಹೆಸರು ಕೆಡಿಸಲು ಹೊರಟಿದ್ದಾರೆ. ನೆಹರು ತತ್ವಗಳನ್ನು ಮುಗಿಸಿದರೆ ಬಿಜೆಪಿಯವರಿಗೆ ನಷ್ಟ ಎಂದು ಹೇಳಿದರು.
ನೆಹರು ಅವರ ಕೆಲಸ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನೆಹರು ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದಿತ್ತು. ಆದರೆ ಅವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಪ್ರಜಾಪ್ರಭುತ್ವವನ್ನು ಪಾಲಿಸಿದರು. ಆದರೆ ಇವತ್ತು ಮೋದಿಯವರು ಅಧಿಕಾರ ಸಿಕ್ಕಿದೆ ಎಂದು ಎಲ್ಲರನ್ನು ತುಳಿದು ಹೋಗುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕಿದೆ ಎಂದರು.
ಹಿಂದು-ಮುಸ್ಲಿಂರನ್ನು ಒಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬಡವರನ್ನು ಬಡವರಾಗಿ ಮಾಡುವ ಜತೆಗೆ ರೈತರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇರಬೇಕು. ಒಗ್ಗಟ್ಟು ಇರದಿದ್ದರೆ ಪಕ್ಷಕ್ಕೆ ಕಷ್ಟವಾಗುತ್ತದೆ. ಈಗಲಾದರೂ ಎಚ್ಚೆತ್ತು ಕೆಲಸ ಮಾಡಿದರೆ ಭವಿಷ್ಯವಿದೆ. ಇದನ್ನು ಅರಿತುಕೊಂಡು ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಖರ್ಗೆ ಅವರು ಕಿವಿ ಮಾತು ಹೇಳಿದರು.
ಸಿದ್ದರಾಮಯ್ಯ ಹೇಳಿಕೆ
ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಬಿಜೆಪಿ ಇದನ್ನು ಎಲ್ಲೂ ಹೇಳಲ್ಲ. ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್‌ನ ಕೊಡುಗೆ ಏನು, ಅವರ ಬಲಿದಾನ ಏನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಆರ್‌ಎಸ್‌ಎಸ್‌ನ ಕೊಡುಗೆ ಬಗ್ಗೆ ಪ್ರಶ್ನಿಸಿದರೆ ವಿವೇಕಾನಂದರನ್ನು, ಭಗತ್‌ಸಿಂಗ್‌ರನ್ನು, ಸರ್ದಾರ್ ವಲ್ಲಭಬಾಯ್ ಪಟೇಲರನ್ನು ಮುಂದೆ ತರುತ್ತಾರೆ. ಇವರೆಲ್ಲಾ ಆರ್‌ಎಸ್‌ಎಸ್‌ನಿಂದ ಬಂದವರಲ್ಲ. ಇವರೆಲ್ಲರೂ ಸ್ವಾತಂತ್ರ್ಯ ಸೇನಾನಿಗಳು. ಇವರನ್ನು ನಮ್ಮವರೆಂದು ಬಿಂಬಿಸಿಕೊಳ್ಳಲು ಆರ್‌ಎಸ್‌ಎಸ್ ಹೊರಟಿದೆ. ಇವರು ಹುಟ್ಟಿರುವುದು ಆರ್‌ಎಸ್‌ಎಸ್‌ನಿಂದ. ಇವರ ಬಗ್ಗೆ ಎಚ್ಚರಿಯಿಂದಿರಬೇಕು. ಆರ್‌ಎಸ್‌ಎಸ್ ಹಿಂದೂ ಸಂಘಟನೆಯಲ್ಲ, ಜಾತಿ ಸಂಘಟನೆ ಎಂದು ಹರಿಹಾಯ್ದರು.
ಪ್ರಧಾನಿ ಮೋದಿ ಸುಳ್ಳಿನ ಪ್ರಧಾನಿ. ಸುಳ್ಳು ಹೇಳಿಕೊಂಡೇ ತಿರುಗಾಡುತ್ತಿರುವ ಭೂಪ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಹೇಳಿಕೆ
ನೆಹರು ಅವರು ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಟ್ಟು ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಕೊಟ್ಟರು. ಉದ್ಯೋಗ ಸೃಷ್ಠಿಗೆ ಕ್ರಮ ಕೈಗೊಂಡರು. ಆದರೆ ಬಿಜೆಪಿ ಸಣ್ಣ ಕೈಗಾರಿಕೆಗಳನ್ನು ನಾಶ ಮಾಡಿ ಉದ್ಯೋಗ ಇಲ್ಲದಂತೆ ಮಾಡಿದೆ. ಬಿಎಸ್‌ಎನ್‌ಎಲ್ ಮುಚ್ಚು ಹಾಕುತ್ತಿದ್ದಾರೆ. ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಉಪಚುನಾವಣೆ ಗೆದ್ದ ತಕ್ಷಣ ಮುಂದೆ ಬಿಜೆಪಿಯವರೇ ಗೆಲ್ಲಬಹುದು ಎಂಬುದು ಭ್ರಮೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಹಾಗೂ ಬಳ್ಳಾರಿ ಉಪಚುನಾವಣೆಗಳನ್ನು ಗೆದ್ದಿದ್ದೆವು. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುವುದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಮಾಜಿ ಕೇಂದ್ರ ಸಚಿವ ಮುನಿಯಪ್ಪ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಪಕ್ಷದ ಕಾರ್ಯಾಧ್ಯಕ್ಷರಾದ ಸಲೀಂ ಮಹಮದ್, ಈಶ್ವರಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.