ನೆಹರು ಪುಣ್ಯತಿಥಿ: ಪ್ರಥಮ ಪ್ರಧಾನಿಗೆ ಗಣ್ಯರ ನಮನ


ನವದೆಹಲಿ, ಮೇ ೨೭- ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ೫೫ನೇ ಪುಣ್ಯ ತಿಥಿ. ದೇಶದೆಲ್ಲೆಡೆ ನೆಹರು ಅವರ ಸಾಧನೆಗಳನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆದಿವೆ.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರು ೧೯೪೭-೧೯೬೪ ರ ಮೇ ೨೭ ರವರೆಗೂ ಸೇವೆ ಸಲ್ಲಿಸಿದರು. ದೂರದೃಷ್ಟಿಯ ಯೋಜನೆಗಳಿಂದ ದೇಶವನ್ನು ಬಹು ಎತ್ತರಕ್ಕೆ ಬೆಳೆಸಿದ ರಾಷ್ಟ್ರದ ಶ್ರೇಷ್ಠ ನಾಯಕ.
ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರದ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು.
೧೯೪೭ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ ೧೯೬೪ ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ .
ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ಎಂದು ಪ್ರಸಿದ್ಧರಾಗಿದ್ದರು.
ನೆಹರು ಪುಣ್ಯತಿಥಿ ಅಂಗವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಅನೇಕ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.