
ಸಂಜೆವಾಣಿ ವಾರ್ತೆ
ಬಳ್ಳಾರಿ, ನ.15: ಆಧುನಿಕ ಭಾರತದ ನಿರ್ಮಾತೃ ಎಂದೇ ಕರೆಯಲ್ಪಡುವವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರೂ ಅವರ 135ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ,ವೃತ್ತಿಯಿಂದ ವಕೀಲರಾಗಿ,ಗಾಂಧೀಜಿ ಅವರ ಅಪ್ಪಟ ಶಿಷ್ಯನಾಗಿ,ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಿ ತಮ್ಮ ಆಡಳಿತದ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆ, ನೀರಾವರಿ, ಜಲವಿದ್ಯುತ್, ಕೈಗಾರಿಕೆ ಹಾಗೂ ಕುಡಿಯುವ ನೀರಿಗಾಗಿ ಹೀಗೆ ವಿವಿಧೋದ್ದೇಶಗಳಿಗೆ ಅನುಕೂಲವಾಗುವಂತೆ ದೇಶದಾದ್ಯಂತ ಅನೇಕ ಅಣೆಕಟ್ಟನ್ನು ನಿರ್ಮಾಣ ಮಾಡಿಸಿದರು.
ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಇಸ್ರೋ ಸ್ಥಾಪಿಸಿದರು. ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.
ವಿದೇಶಾಂಗ ನೀತಿಯಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಕಾನೂನು ಜಾರಿಗೆ ತಂದರು.
ತಂದೆಯಿಂದ ಮಗಳಿಗೆ ಪತ್ರ, ಡಿಸ್ಕವರಿ ಆಫ್ ಇಂಡಿಯಾ ಅವರ ಪ್ರಸಿದ್ಧ ಕೃತಿಗಳಾಗಿದ್ದು ವಿಶ್ವಾದ್ಯಂತ ಓದುಗರ ಮನಗೆದ್ದಿವೆ.
ಅಷ್ಟೇ ಅಲ್ಲದೆ ಮಕ್ಕಳೆಂದರೆ ಹಾಗೂ ಗುಲಾಬಿ ಎಂದರೆ ಅವರಿಗೆ ತುಂಬಾ ಪ್ರೀತಿ. ಆದ್ದರಿಂದ ನಾವು ನೀವೆಲ್ಲರೂ ಅವರ ಆದರ್ಶ ಗುಣಗಳನ್ನು ಹಾಗೂ ದೇಶಾಭಿಮಾನದ ಮೈಗೂಡಿಸಿಕೊಂಡು ಬಾಳೋಣ ಎಂದರು.
ಶಿಕ್ಷಕರಾದ ಚನ್ನಮ್ಮ ಪೂಜೆ ನೆರವೇರಿಸದರೆ,ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕರಾದ ದಿಲ್ಷಾದ್ ಬೇಗಂ,ಮೋದಿನ್ ಸಾಬ್, ಸುಮತಿ, ಸುಧಾ, ಶ್ವೇತಾ, ಉಮ್ಮೇಹಾನಿ, ಶಶಮ್ಮ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.